ಗೃಹ ಜ್ಯೋತಿ ಯೋಜನೆಗೆ ಆಗಸ್ಟ್ 1 ರಂದು ಕಲಬುರಗಿಯಲ್ಲಿ ಚಾಲನೆ ನೀಡುವ ಕುರಿತು ಯೋಚಿಸುತ್ತಿದ್ದೇವೆ. ಈ ಯೋಜನೆಯ ಮಾರ್ಗಸೂಚಿಗಳ ಕುರಿತು ಇರುವ ಎಲ್ಲ ಗೊಂದಲಗಳನ್ನು ನಿವಾರಿಸಿ, ನಾಗರಿಕರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಲು ಅವಕಾಶವಿದೆ. ಇದಲ್ಲದೆ, ಎಸ್ಕಾಂಗಳ ಎಲ್ಲ ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗುವುದು. ಜೂನ್ 15 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳ ಮೂಲಕ ಹಾಗೂ ಮನೆಯಲ್ಲಿಯೇ ಕಂಪ್ಯೂಟರ್ ಮೂಲಕ ಅಥವಾ ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹೊಸ ಮನೆ, ಹೊಸ ಬಾಡಿಗೆದಾರರಿಗೆ ರಾಜ್ಯದ ವಿದ್ಯುತ್ ಬಳಕೆಯ ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು. ಒಂದು ವರ್ಷದ ಸರಾಸರಿ ಲಭ್ಯವಾದ ನಂತರ, ಈ ದತ್ತಾಂಶವನ್ನು ಆಧರಿಸಿ, ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹಳೆ ವಿದ್ಯುತ್ ಬಿಲ್ ಬಾಕಿ ಪಾವತಿಗೆ ಸೆಪ್ಟೆಂಬರ್ 30 ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಗೃಹಜ್ಯೋತಿ ಯೋಜನೆಗೆ ಆಧಾರ್, ಆರ್. ಆರ್. ಸಂಖ್ಯೆ, ಬಾಡಿಗೆದಾರರು ಕರಾರು ಪತ್ರ ಹಾಗೂ ಅದೇ ವಿಳಾಸದ ಮತದಾರರ ಗುರುತು ಚೀಟಿ ಮಾಹಿತಿ ಸಲ್ಲಿಸಿ, ಸೌಲಭ್ಯ ಪಡೆಯಬಹುದಾಗಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
https://twitter.com/CMofKarnataka/status/1666786562523426821
https://twitter.com/CMofKarnataka/status/1666787051147243521
https://twitter.com/CMofKarnataka/status/1666787307213701123
https://twitter.com/CMofKarnataka/status/1666787464294584323