ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿ ಅಂಶ ಬಹಿರಂಗವಾಗದಂತೆ ಗೌಪ್ಯತೆ ಕಾಪಾಡಲು ಸಿಎಂ ಕಟ್ಟಪ್ಪಣೆ

ಬೆಂಗಳೂರು: ಜಾತಿ ಗಣತಿ ವರದಿ ಅಂಶಗಳು ಬಹಿರಂಗವಾಗದಂತೆ ಗೌಪ್ಯತೆ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

2018 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವರದಿಯಲ್ಲಿ ದಾಖಲಾಗಿವೆ ಎನ್ನಲಾದ ಜಾತಿವಾರು ಅಂಕಿ ಸಂಖ್ಯೆಗಳಿಗೆ ಪ್ರಭಾವಿ ಸಮುದಾಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ವರದಿ ಅಂಶಗಳು ಬಹಿರಂಗವಾಗದಂತೆ ಗೌಪ್ಯತೆ ಕಾಪಾಡಲು ಸಿಎಂ ತಿಳಿಸಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸುವವರೆಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಇರಬೇಕು. ಯಾವುದೇ ಕಾರಣಕ್ಕೂ ಅದರಲ್ಲಿನ ಮಾಹಿತಿ ಸೋರಿಕೆಯಾಗಬಾರದು. ಸೋರಿಕೆಯಾದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ್ದಾರೆ.

ಆಯೋಗದ ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ವರದಿಯ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸಿಎಂ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕರಿಸಿದ್ದು, ತಕ್ಷಣಕ್ಕೆ ವರದಿ ಸ್ವೀಕರಿಸಿದಲ್ಲಿ ಪ್ರಭಾವಿ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗುವ ಆತಂಕ ಕೂಡ ಇದೆ. ಇದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆ ಇರುವುದರಿಂದ ಸಚಿವ ಸಂಪುಟ ಉಪ ಸಮಿತಿ ರಚಿಸುವ ಚಿಂತನೆ ನಡೆದಿದೆ. ಪ್ರಭಾವಿ ಸಮುದಾಯದ ಸಚಿವರನ್ನೇ ಸಂಪುಟ ಉಪ ಸಮಿತಿ ಅಧ್ಯಕ್ಷರು, ಸದಸ್ಯರನ್ನಾಗಿ ನೇಮಕ ಮಾಡಿ ಸಾಧಕ ಬಾಧಕದ ಬಗ್ಗೆ ವರದಿ ಪಡೆದು ನಂತರ ತೀರ್ಮಾನ ಕೈಗೊಳ್ಳಲು ಚಿಂತನೆ ಕೂಡ ನಡೆದಿದೆ ಎಂದು ಹೇಳಲಾಗಿದೆ.

ಇನ್ನು 2011ರ ಜನಗಣತಿ ಆಧಾರವಾಗಿಟ್ಟುಕೊಂಡು 2015 ರಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆದಿದ್ದು, ಜನಗಣತಿ ನಡೆದು 13 ವರ್ಷ ಕಳೆದಿರುವುದರಿಂದ ವರದಿ ಎಷ್ಟು ಪ್ರಸ್ತುತ ಎನ್ನುವ ಆಕ್ಷೇಪ ಕೂಡ ಕೇಳಿ ಬಂದಿದೆ. ಈಗಾಗಲೇ ವೀರಶೈವ ಲಿಂಗಾಯತ ಮಹಾಸಭಾ, ಕೆಲವು ಸಚಿವರು ಸೇರಿ ಹಲವರು ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read