ರೈತರ ಖಾತೆಗೆ 10 ಸಾವಿರ ರೂ., 5 ಲಕ್ಷ ಯುವಕರಿಗೆ ಉದ್ಯೋಗ: ಸಿಎಂ ಬೊಮ್ಮಾಯಿ

ಚಿತ್ರದುರ್ಗ: ಸರ್ಕಾರದಿಂದ 10 ಹೆಚ್.ಪಿ.ವರೆಗೆ ರೈತರಿಗೆ ಉಚಿತ ವಿದ್ಯುತ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂ. ಸಹಾಯಧನಕ್ಕೆ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ಅನುದಾನ ನೀಡಿ 10 ಸಾವಿರ ರೂ. ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹೊಳಲ್ಕೆರೆ ಪಟ್ಟಣದಲ್ಲಿ ಭಾನುವಾರ ಹೊಳೆಲ್ಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸೌಲಭ್ಯ ಮತ್ತು ಸಲಕರಣೆಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸ್ತ್ರೀ ಸಾಮರ್ಥ್ಯ ಯೋಜನೆ ಅಡಿ ಸ್ವ ಸಹಾಯ ಸಂಘಗಳಿಗೆ ಸಹಾಯಧನ, ಉಚಿತವಾಗಿ ಪಿ.ಯು.ಸಿ, ಪದವಿ ಶಿಕ್ಷಣ, ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ 5 ಲಕ್ಷ ಯುವಕರಿಗೆ ಉದ್ಯೋಗ ಅವಕಾಶ ನೀಡುವ ಯೋಜನೆ ರೂಪಿಸಲಾಗಿದೆ.  ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್, ರೈತರಿಗೆ ಜೀವವಿಮೆ, ಲಂಬಾಣಿ(ಬಂಜಾರ), ಭೋವಿ ಸೇರಿದಂತೆ ಅನೇಕ ಪರಿಶಿಷ್ಟ ವರ್ಗದ ನಿಗಮಗಳನ್ನು ಸ್ಥಾಪಿಸಲಾಗಿದೆ. ಹಿಂದುಳಿದ ವರ್ಗಗಳ ಏಳಿಗೆಗಾಗಿ ಬಜೆಟ್ನಚಲ್ಲಿ ಅಧಿಕ ಹಣ ಮೀಸಲಿಡಲಾಗಿದೆ ಎಂದರು.

ಮಧ್ಯ ಕರ್ನಾಟಕದ ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು ಶಂಕುಸ್ಥಾಪನೆ ಮಾಡಿದ್ದು ನಾವೇ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುತ್ತಿರುವುದು ನಾವೇ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ಹಾಗೂ ನಾವೇ ಆಗಮಿಸಿ ಉದ್ಘಾಟನೆಯನ್ನು ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ 5 ಲಕ್ಷ ಸ್ತ್ರೀಸಾಮರ್ಥ್ಯ ಸಂಘಗಳಿಗೆ ಸಹಾಯಧನ ನೀಡಿ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಈಗಾಗಲೆ ಅನುಷ್ಠಾನಗೊಂಡಿದ್ದು, ಮಾ. 23 ರಂದು ಯುವಕರ ಸಂಘಗಳಿಗೆ ಸುತ್ತುನಿಧಿಯನ್ನು ನೀಡಿ, ಸುಮಾರು 5 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಪುರಸಭೆ ಅಧ್ಯಕ್ಷ ಆರ್.ಎ. ಅಶೋಕ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಪಂ ಸಿಇಓ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಸೇರಿದಂತೆ ಮತ್ತಿತರರು ಇದ್ದರು. ತಹಶಿಲ್ದಾರ್ ನಾಗರಾಜ್ ಸ್ವಾಗತಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read