ಅಮೆರಿಕ ಮತ್ತು ಕೆನಡಾದ ಆಕಾಶದಲ್ಲಿ ಕಾಣಿಸಿಕೊಂಡ ವಿಚಿತ್ರವಾದ ಬೆಳಕಿನ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರೀ ಸಂಚಲನ ಮೂಡಿಸಿದೆ. ಭಾಗಶಃ ಮೋಡ ಕವಿದ ವಾತಾವರಣದಲ್ಲಿ ನಿಗೂಢವಾಗಿ ಚಲಿಸುತ್ತಿರುವ ಈ ಬೆಳಕಿನ ಚೆಂಡುಗಳು ಮತ್ತು ಬಣ್ಣಬಣ್ಣದ ದೀಪಗಳು ದಿಕ್ಕನ್ನು ಬದಲಾಯಿಸುತ್ತಿರುವುದು ಹಾಗೂ ನೇರವಾಗಿ ಸಾಲಾಗಿ ನಿಂತಿರುವುದು ಕಂಡುಬಂದಿದೆ. ಈ ದೃಶ್ಯಗಳು UFO (ಗುರುತಿಸಲಾಗದ ಹಾರಾಡುವ ವಸ್ತು) ಗಳ ಕುರಿತಾದ ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿವೆ.
ಸಾಮಾನ್ಯವಾಗಿ ಮಸುಕಾಗಿ ಕಾಣಿಸುವ UFO ವಿಡಿಯೋಗಳಿಗಿಂತ ಭಿನ್ನವಾಗಿ, ಈ ವಿಡಿಯೋ ಉತ್ತಮ ಗುಣಮಟ್ಟದ್ದಾಗಿದ್ದು, ಅನೇಕರು ಇದನ್ನು ಇದುವರೆಗಿನ ಅತ್ಯಂತ ಸ್ಪಷ್ಟವಾದ UFO ದೃಶ್ಯ ಎಂದು ಬಣ್ಣಿಸಿದ್ದಾರೆ. ಸಮಯ ಮತ್ತು ಸ್ಥಳ ಇನ್ನೂ ಖಚಿತವಾಗಿಲ್ಲದಿದ್ದರೂ, ಈ ವಿಡಿಯೋ ಅಂತರ್ಜಾಲದಲ್ಲಿ ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ‘dom_lucre’ ಎಂಬ ಖಾತೆಯಿಂದ X (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋಗೆ ಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಕೆಲವರು ಇದು ಅನ್ಯಗ್ರಹ ಜೀವಿಗಳೇ ಇರಬಹುದು ಎಂದು ವಾದಿಸಿದರೆ, ಇನ್ನು ಕೆಲವರು ಇದನ್ನು ಹಾಸ್ಯ ಮತ್ತು ತಿರಸ್ಕಾರದಿಂದ ನೋಡಿದ್ದಾರೆ. ಒಬ್ಬ ಬಳಕೆದಾರರು ತಾವೇ ಇಂತಹ ದೃಶ್ಯವನ್ನು ನೋಡುವವರೆಗೂ ನಂಬುತ್ತಿರಲಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅನ್ಯಗ್ರಹದ ಗಗನನೌಕೆಗಳು ರಹಸ್ಯವಾಗಿ ಬರಲು ಬಯಸಿದರೆ ಅವುಗಳ ಮೇಲೆ ದೀಪಗಳನ್ನು ಏಕೆ ಹಾಕಿಕೊಳ್ಳುತ್ತವೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು ಇದು ಕೇವಲ ಕೃತಕ ಬೆಳಕಿನ ಪ್ರದರ್ಶನ ಅಥವಾ ಬೇರೆ ಯಾವುದೋ ತಾಂತ್ರಿಕ ಕಾರಣದಿಂದ ಉಂಟಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಬಳಕೆದಾರರು ಇದು AI (ಕೃತಕ ಬುದ್ಧಿಮತ್ತೆ) ನಿಂದ ರಚಿತವಾದ ವಿಡಿಯೋ ಆಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ವಿಚಿತ್ರ ಬೆಳಕಿನ ವಿಡಿಯೋ ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಇದರ ಸತ್ಯಾಸತ್ಯತೆ ಏನೇ ಇರಲಿ, ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಜನರ ಕುತೂಹಲವನ್ನು ಇದು ಮತ್ತೊಮ್ಮೆ ಕೆರಳಿಸಿದೆ ಎಂಬುದಂತೂ ಸತ್ಯ.
🔥🚨BREAKING: This strange light was recorded by witnesses in the United States and Canada. Witnesses report colorful UAPs and other unexplained phenomena lighting up the sky. pic.twitter.com/wToGHdXJ4u
— Dom Lucre | Breaker of Narratives (@dom_lucre) April 15, 2025