ಬೆಂಗಳೂರು: ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಸೇರಿದಂತೆ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನವನ್ನು ಸರ್ಕಾರದಿಂದಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎ. ಅಮೃತರಾಜ್ ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಪೌರಕಾರ್ಮಿಕರು ಸೇರಿದಂತೆ ಕಾಯಂ ನೌಕರರಿಗೆ ಪಾವತಿಸಬೇಕಾಗಿರುವ ಪರಿಷ್ಕೃತ ವೇತನವನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳ ಸ್ವಂತ ಸಂಪನ್ಮೂಲದಿಂದಲೇ ಭರಿಸುವಂತೆ ಹಾರ್ದಿಕ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಿದ್ದಾರೆ.
7ನೇ ವೇತನ ಆಯೋಗ ಜಾರಿಗೆ ತರಲು ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ಚರ್ಚಿಸಲು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಏಪ್ರಿಲ್ 10 ರಂದು ತುರ್ತು ಸಭೆ ಕರೆದಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಸೇರಿ ಎಲ್ಲಾ ಕಾಯಂ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನವನ್ನು ಸರ್ಕಾರದಿಂದ ಬಿಡುಗಡೆ ಮಾಡಬೇಕೆಂದು ಪತ್ರ ಬರೆದಿದ್ದರೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಸೇರಿ ವಿವಿಧ ಸಂಘಟನೆಗಳು ಒಟ್ಟುಗೂಡಿಸಿ ಆಡಳಿತ ಚಟುವಟಿಕೆ ಕಾರ್ಯ ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಮೃತರಾಜ್ ಮಾಹಿತಿ ನೀಡಿದ್ದಾರೆ.