ಕಲಬುರಗಿ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಚಿತ್ತಾಪುರದಲ್ಲಿ ಆರ್.ಎಸ್.ಎಸ್.ಪಥಸಂಚಲನ ಕೊನೆಗೂ ಸರ್ಕಾರದ ಷರತ್ತುಬದ್ಧ ಅನುಮತಿಯೊಂದಿಗೆ ಆರಂಭವಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರ್.ಎಸ್.ಎಸ್.ಪಥಸಂಚಲನ ಆರಂಭವಾಗಿದೆ.
ಚಿತ್ತಾಪುರ ನಗರದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನದಲ್ಲಿ 300 ಗಣವೇಷಧಾರಿಗಳು ಹಾಗು 50 ಬ್ಯಾಂಡ್ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಪಥಸಂಚಲನ ಮಾರ್ಗದುದ್ದಕ್ಕೂ ಸಿಸಿ ಕ್ಯಾಮರಾಕಣ್ಗಾವಲು ಹಾಕಲಾಗಿದ್ದು, ಪೊಲೀಸರು ಎಲ್ಲೆಡೆ ಕಟ್ಟೆಚ್ಚರವಹಿಸಿದ್ದಾರೆ. ಪಥಸಂಚಲನ ಸಾಗುವ ರಸ್ತೆಯುದ್ದಕ್ಕೂ ಕೇಸರಿ ಬಾವುಟ ರಾರಾಜಿಸುತ್ತಿದೆ. ಗಣವೇಷಧಾರಿಗಳಿಗೆ ಮಾರ್ಗದುದ್ದಕ್ಕೂ ಜನರು ಪುಷ್ಪಮಳೆಗರೆದು ಸ್ವಾಗತಿಸಿದ್ದಾರೆ.
ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗಿರುವ ಪಥಸಂಚಲನ ಕೆನರಾ ಬ್ಯಾಂಕ್ ಸರ್ಕಲ್, ಎಪಿಎಂಸಿ ಮಾರ್ಗವಾಗಿ ಸಾಗಿ ಮತ್ತೆ ಬಜಾಜ್ ಕಲ್ಯಾಣ ಮಂಟಪಕ್ಕೆ ಬಂದು ತಲುಪಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.
