ಚಿಕ್ಕಬಳ್ಳಾಪುರ: ರಾತ್ರೋರಾತ್ರಿ ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಿರುವುದನ್ನು ವಿರೋಧಿಸಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರ ಬಂದ್ ಗೆ ವಿವಿಧ ದಲಿತ ಪರ ಸಂಘಟನೆಗಳು ಕರೆ ನೀಡಿವೆ. ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಕೂಡ ಬಂದ್ ಗೆ ಬೆಂಬಲ ನೀಡಿದ್ದಾರೆ.
ಚಿಂತಾಮಣಿಯ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ತಿಂಗಳ ಹಿಂದೆ ಸ್ಥಾಪಿಸಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಸಚಿವ ಡಾ.ಎಂ.ಸಿ. ಸುಧಾಕರ್ ರಾತ್ರೋರಾತ್ರಿ ಪ್ರತಿಮೆ ತೆರವುಗೊಳಿಸಿದ್ದಾರೆ ಎಂದು ದಲಿತಪರ ಸಂಘಟನೆಗಳು ಆರೋಪಿಸಿದ್ದು, ಮೇ 22 ರಂದು ಬಂದ್ ಗೆ ಕರೆ ನೀಡಿವೆ.
ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ತಾಲೂಕು ದಂಡಾಧಿಕಾರಿ ಸುದರ್ಶನ್ ಯಾದವ್ ಅವರು ಚಿಂತಾಮಣಿ ನಗರದಲ್ಲಿ ಬುಧವಾರ ಸಂಜೆಯಿಂದ ಮೇ 23ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.