ಚಿಕ್ಕಮಗಳೂರು: ಮಹಿಳೆಯ ಕತ್ತು ಸೀಳಿ ಹತ್ಯೆಗೈದು ಪರಾರಿಯಾಗಿದ್ದ ಹಂತಕನನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ಜನಾರ್ಧನ ಬಂಧಿತ ಆರೋಪಿ. ಸಂಧ್ಯಾ (32) ಕೊಲೆಯಾದ ಮಹಿಳೆ. ಮೃತ ಸಂಧ್ಯಾ ಜನಾರ್ಧನನ್ನ ಅತ್ತೆಯ ಮಗಳು. ಸಂಧ್ಯಾಗೆ ಮದುವೆಯಾಗಿ ಮೂವರು ಮಕ್ಕಳಿದ್ದರು. ಪತಿ-ಪತ್ನಿ ನಡುವೆ ಜಗಳವಾಗಿ ಸಂಧ್ಯಾ ಪತಿಯಿಂದ ದೂರಾಗಿದ್ದಳು. ನಾಲ್ಕು ವರ್ಷಗಳಿಂದ ತವರು ಮನೆಯಲ್ಲಿಯೇ ವಾಸವಾಗಿದ್ದಳು. ಪತಿಯಿಂದ ದೂರಾಗಿದ್ದ ಸಂಧ್ಯಾಳ ಮೇಲೆ ಜನಾರ್ಧನನಿಗೆ ಪ್ರೀತಿ ಮೂಡಿತ್ತು. ಆದರೆ ಜನಾರ್ಧನನಿಗೂ ಅದಾಗಲೇ ಮದುವೆಯಾಗಿತ್ತು.
ಕೊಲೆಯಾಗುವ ನಾಲ್ಕು ದಿನಗಳ ಹಿಂದಷ್ಟೇ ಸಂಧ್ಯಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಈ ವೇಳೆ ಆಕೆಯ ತಂದೆ ಆಲ್ದೂರು ಠಾಣೆಗೆ ದೂರು ನೀಡಿದ್ದರು. ನಾಲ್ಕು ದಿನಗಳ ಬಳಿಕ ಇದ್ದಕ್ಕಿದ್ದಂತೆ ಮತ್ತೆ ಮನೆಗೆ ವಾಪಾಸ್ ಆಗಿದ್ದಳು. ಜನಾರ್ಧನ ಮನೆಗೆ ಬಂದವನು ಸಂಧ್ಯಾಳ ಜೊತೆ ಜಗಳವಾಡಿದ್ದ. ಬಟ್ಟೆ ತ್ಳೆಯುತ್ತಿದ್ದ ಸಂಧ್ಯಾಳನ್ನು ಕತ್ತುಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ.
ಸದ್ಯ ಆಲ್ದೂರು ಠಾಣೆ ಪೊಲೀಸರು ಜನಾರ್ಧನನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
