ಬೀದರ್: ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಜನಿವಾರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿ ಕಳುಹಿಸಿದ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಬೆನ್ನಲ್ಲೇ ಬೀದರ್ ನಲ್ಲಿಯೂ ಇಂತದ್ದೇ ಘಟನೆ ನಡೆದಿದೆ.
ನಿನ್ನೆ ಬೆಳಿಗ್ಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿಗೆ ಅಲ್ಲಿನ ಸಿಬ್ಬಂದಿ, ಅಧಿಕಾರಿಗಳು ಜನಿವಾರ ತೆಗೆಯಲು ಹೇಳಿದ್ದಾರೆ. ಆದರೆ ವಿದ್ಯಾರ್ಥಿ ಒಪ್ಪದ ಕಾರಣಕ್ಕೆ ಆತನನ್ನು ಪರೀಕ್ಷಾ ಕೇಂದ್ರದಿಂದಲೇ ಹೊರ ಕಳುಹಿಸಲಾಗಿದೆ. ಇದರಿಂದ ವಿದ್ಯಾರ್ಥಿ ಸಿಇಟಿಯ ಒಂದು ವಿಷಯದ ಪರೀಕ್ಷೆಯನ್ನೇ ಬರೆಯಲು ಸಾಧ್ಯವಾಗಿಲ್ಲ. ಸಿಇಟಿ ಪರೀಕ್ಷಾ ಕೇಂದ್ರದ ಸಿಬ್ಬಂದಿ, ಅಧಿಕಾರಿಗಳ ನಡೆಯಿಂದಾಗಿ ವಿದ್ಯಾರ್ಥಿಯ ಭವಿಷ್ಯವೇ ತೊಂದರೆಗೆ ಸಿಲುಕಿದೆ.
ಬೀದರ್ ನ ಸಾಯಿಸ್ಫೂರ್ತಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಸುಚಿವೃತ ಕುಲಕರ್ಣಿ ಪರೀಕ್ಷಾ ಕೇಂದ್ರಕ್ಕೆ ಸಿಇಟಿ ಬರೆಯಲು ಬಂದಿದ್ದ ವೇಳೆ ಸಿಬ್ಬಂದಿಗಳು ಜನಿವಾರವನ್ನು ಕಟ್ ಮಾಡಿ ತೆಗೆಯುವಂತೆ ಹೇಳಿದ್ದಾರೆ. ಅದಕ್ಕೆ ಆತ ಒಪ್ಪದ ಕಾರಣ ಪರೀಕ್ಷಾ ಕೇಂದ್ರದಿಂದ ಹೊರ ಕಳುಹಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿ ಮ್ಯಾಥ್ಸ್ ವಿಷಯದ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ವಿದ್ಯಾರ್ಥಿಯ ಭವಿಷ್ಯದ ಜೊತೆಯೇ ಪರೀಕ್ಷಾ ಸಿಬ್ಬಂದಿಗಳು ಹುಚ್ಚಾಟವಾಡಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಹಾಗೂ ಬೀದರ್ ನಲ್ಲಿ ನಡೆದ ಘಟನೆಗಳಿಗೆ ರಾಜ್ಯಾದ್ಯಂತ ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬ್ರಾಹ್ಮಣ ಮಹಾಸಭಾ ಬೃಹತ್ ಹೋರಾಟಕ್ಕೆ ಕರೆ ಕೊಟ್ಟಿದೆ.