ಧಾರವಾಡ: ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದರೆ, ಅತ್ತ ಬೀದರ್ ನಲ್ಲಿ ಜನಿವಾರ ತೆಗೆಯದ್ದಕ್ಕೆ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರದಿಂದಲೇ ಹೊರ ಕಳುಹಿಸಿದ್ದ ಘಟನೆ ನಡೆದಿತ್ತು. ಇದೀಗ ಧಾರವಾಡದಲ್ಲಿಯೂ ಇಂತದ್ದೇ ಘಟನೆ ನಡೆದಿತ್ತು ಎಂಬ ಬಗ್ಗೆ ತಿಳಿದುಬಂದಿದೆ.
ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರವನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಕತ್ತರಿಸಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ನಗರದ ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ರಾಘವೇಂದ್ರ ನಗರದ ವಿದ್ಯಾರ್ಥಿ ನಂದನ್, ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದ ವೇಳೆ, ಪರೀಕ್ಷಾ ಕೇಂದ್ರದ ಭದ್ರತಾ ಸಿಬ್ಬಂದಿಗಳು ಜನಿವಾರವನ್ನು ತೆಗೆಯಲು ಹೇಳಿದ್ದಾರೆ. ಅದಕ್ಕೆ ವಿದ್ಯಾರ್ಥಿ ನಂದನ್ ವಿರೋಧಿಸಿದ್ದಕ್ಕೆ ಸಮಯವಿಲ್ಲ ಎಂದು ಹೇಳುತ್ತಾ ತಕ್ಷಣ ಕತ್ತರಿ ತಂದು ಭದ್ರತಾ ಸಿಬ್ಬಂದಿಗಳೇ ಜನಿವಾರವನ್ನು ಕತ್ತರಿಸಿ ವಿದ್ಯಾರ್ಥಿ ಕೈಗೆ ಕೊಟ್ಟಿದ್ದಾರೆ. ಜನಿವಾರವನ್ನು ಕತ್ತರಿಸಿ ಮತ್ತೆ ಆತನ ಕೈಗೆ ಕೊಟ್ಟು ಪರೀಕ್ಷಾ ಕೇಂದ್ರದ ಒಳಗೆ ಕಳುಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಘಟನೆಯಿಂದ ಶಾಕ್ ಆದ ವಿದ್ಯಾರ್ಥಿ ಮಾತನಾಡದೇ ಪರೀಕ್ಷಾ ಕೇಂದ್ರಕ್ಕೆ ತೆರಳಲಿ ಸಿಇಟಿ ಪರೀಕ್ಷೆ ಬರೆದು ಬಂದಿದ್ದಾನೆ. ಘಟನೆ ನಡೆದ ದಿನ ವಿದ್ಯಾರ್ಥಿ ಪೋಷಕರಿಗೂ ಹೇಳಿರಲಿಲ್ಲ. ಆದರೆ ಸಿಇಟಿ ಪರೀಕ್ಷೆಗೆ ಜನಿವಾರ ತೆಗೆಸಿದ ವಿವಾದ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ವಿದ್ಯಾರ್ಥಿ ತನಗೂ ಪರೀಕ್ಷಾ ಕೇಂದ್ರದಲ್ಲಿ ಹೀಗೆ ಮಾಡಿದ್ದಾಗಿ ತಿಳಿಸಿದ್ದಾನೆ.