ನವದೆಹಲಿ: ಕಿರು ಜಲವಿದ್ಯುತ್ ಯೋಜನೆಗೆ 2,200 ಕೋಟಿ ರೂ.ಗಳ ನಾಗರಿಕ ಕಾಮಗಾರಿಗಳನ್ನು ಮಂಜೂರು ಮಾಡುವಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತು ಇತರ ಏಳು ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ವಿಶೇಷ ನ್ಯಾಯಾಲಯದ ಮುಂದೆ ಮೂರು ವರ್ಷಗಳ ತನಿಖೆಯ ನಂತರ ಸಂಸ್ಥೆಯು ತನ್ನ ಆರೋಪಪಟ್ಟಿ ಸಲ್ಲಿಸಿದ್ದು, ಮಲಿಕ್ ಮತ್ತು ಅವರ ಇಬ್ಬರು ಸಹಾಯಕರಾದ ವೀರೇಂದ್ರ ರಾಣಾ ಮತ್ತು ಕನ್ವರ್ ಸಿಂಗ್ ರಾಣಾ ಅವರನ್ನು ಹೆಸರಿಸಿದೆ ಎಂದು ಹೇಳಲಾಗಿದೆ.
ಆರೋಪಪಟ್ಟಿಯಲ್ಲಿ ಹೆಸರಿಸಲಾದ ಇತರ ವ್ಯಕ್ತಿಗಳಲ್ಲಿ ಆಗಿನ ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್(ಸಿವಿಪಿಪಿಪಿಎಲ್) ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಬಾಬು, ಅದರ ನಿರ್ದೇಶಕರಾದ ಅರುಣ್ ಕುಮಾರ್ ಮಿಶ್ರಾ ಮತ್ತು ಎಂ.ಕೆ. ಮಿತ್ತಲ್, ನಿರ್ಮಾಣ ಸಂಸ್ಥೆ ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರೂಪೇನ್ ಪಟೇಲ್ ಮತ್ತು ಖಾಸಗಿ ವ್ಯಕ್ತಿ ಕನ್ವಲ್ಜೀತ್ ಸಿಂಗ್ ದುಗ್ಗಲ್ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಫೆಬ್ರವರಿಯಲ್ಲಿ ಸಿಬಿಐ ಮಲಿಕ್ ಮತ್ತು ಇತರರ ಆವರಣದಲ್ಲಿ ಶೋಧ ನಡೆಸಿತ್ತು.
2019 ರಲ್ಲಿ ಕಿರು ಹೈಡ್ರೊ ಎಲೆಕ್ಟ್ರಿಕ್ ಪವರ್ ಯೋಜನೆಯ ಸುಮಾರು 2,200 ಕೋಟಿ ರೂ. ಮೌಲ್ಯದ ಸಿವಿಲ್ ಕಾಮಗಾರಿಗಳ ಒಪ್ಪಂದವನ್ನು ಖಾಸಗಿ ಕಂಪನಿಗೆ ನೀಡುವಲ್ಲಿ ನಡೆದಿದೆ ಎಂದು ಆರೋಪಿಸಲಾದ ಅವ್ಯವಹಾರಗಳಿಗೆ ಸಂಬಂಧಿಸಿದೆ ಎಂದು 2022 ರಲ್ಲಿ ಎಫ್‌ಐಆರ್ ದಾಖಲಾದ ನಂತರ ಸಿಬಿಐ ತಿಳಿಸಿದೆ.
ಆಗಸ್ಟ್ 23, 2018 ರಿಂದ ಅಕ್ಟೋಬರ್ 30, 2019 ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಮಲಿಕ್ ಯೋಜನೆಗೆ ಸಂಬಂಧಿಸಿದ ಒಂದು ಫೈಲ್ ಸೇರಿದಂತೆ ಎರಡು ಫೈಲ್‌ಗಳನ್ನು ತೆರವುಗೊಳಿಸಲು ತಮಗೆ 300 ಕೋಟಿ ರೂ. ಲಂಚದ ಆಫರ್ ನೀಡಲಾಗಿತ್ತು ಎಂದು ಹೇಳಿಕೊಂಡಿದ್ದರು.
ಕಳೆದ ವರ್ಷ ಸಂಸ್ಥೆ ಶೋಧ ಕಾರ್ಯಾಚರಣೆ ನಡೆಸಿದ ನಂತರ ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಅವರು ನಿರಾಕರಿಸಿದರು. ತಮ್ಮ ದೂರು ನೀಡಿದ ಜನರು ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರನ್ನು ತನಿಖೆ ಮಾಡುವ ಬದಲು ಸಿಬಿಐ ತಮ್ಮ ನಿವಾಸದ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದರು.