ಬೆಂಗಳೂರು: ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ-ಜಾತಿ ಗಣತಿ ಆರಂಭವಾಗಿದೆ. ಶಿಕ್ಷಕರು, ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಗಣತಿ ಕಾರ್ಯ ಆರಂಭಿಸಿದ್ದಾರೆ. ಈನಡುವೆ ಜಾತಿಗಣತಿ ಸಮೀಕ್ಷೆಗೆ ಗೈರಾಗಿದ್ದ 9 ಸಿಬ್ಬಂದಿಗಳನ್ನು ಅಮಾನತುಮಾಡಿ ಆದೇಶ ಹೊರಡಿಸಲಾಗಿದೆ.
ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೆ, ಅಧಿಕಾರಿಗಳ ದೂರವಾಣಿ ಕರೆಯನ್ನು ಕೂಡಾ ಸ್ವೀಕರಿಸದೆ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ತೋರಿದ 8 ಸಹ ಶಿಕ್ಷಕರನ್ನು ಮೈಸೂರಿನಲ್ಲಿ ಸಸ್ಪೆಂಡ್ ಮಾಡಲಾಗಿದೆ. ಜಿಪಂ ಸಿಇಒ ಎಸ್ ಯುಕೇಶ್ ಕುಮಾರ್ ಅವರ ಆದೇಶದ ಮೇರೆಗೆ ಶಾಲಾ ಶಿಕ್ಷಣ ಇಲಾಕೆಯ ಉಪನಿರ್ದೇಶಕ ಎಸ್‌ಟಿ ಜವರೇಗೌಡ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕೊಪ್ಪಳದಲ್ಲಿ ಸಮೀಕ್ಷೆಗೆ ಗೈರಾಗಿದ್ದ ಕುಷ್ಟಗಿ ತಾಲೂಕಿನ ಜೂಲಕುಂಟಿ ಗ್ರಾಮದ ಶಿಕ್ಷಕ ರಾಮಪ್ಪ ತಳವಾರ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ದಾವಣಗೆರೆಯಲ್ಲಿ ಜಾತಿಗಣತಿ ಕಾರ್ಯಕ್ಕೆ ಗೈರಾಗಿದ್ದ ಇಬ್ಬರು ಶಿಕ್ಷಕರು ಹಾಗೂ ಓರ್ವ ಹಾಸ್ಟೆಲ್ ವಾರ್ಡನ್ ಸೇರಿ ಮೂವರನ್ನು ಅಮಾನತುಗೊಳಿಸಲಾಗಿತ್ತು.