ಬೆಂಗಳೂರು: ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ(ಜಾತಿ ಗಣತಿ) ಬಹಿರಂಗವಾಗಿದ್ದು, ರಾಜ್ಯದಲ್ಲಿ ಜಾತಿ ಲೆಕ್ಕ ಈಗ ಅಧಿಕೃತವಾಗಿದೆ. ಮುಸ್ಲಿಮರು ಮೊದಲ ಸ್ಥಾನದಲ್ಲಿದ್ದಾರೆ. 72.25 ಲಕ್ಷ ಮುಸ್ಲಿಮರು ಇದ್ದು, ಜನಸಂಖ್ಯೆಯಲ್ಲಿ ಶೇಕಡ 18.7 ರಷ್ಟು ಪಾಲು ಹೊಂದಿದ್ದಾರೆ.
101 ಜಾತಿಗಳು ಇರುವುದರಿಂದ ಪರಿಶಿಷ್ಟ ಜಾತಿ ನಂಬರ್ ಒನ್ ಅಲ್ಲ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ 75 ಲಕ್ಷ, ಲಿಂಗಾಯಿತ 66 ಲಕ್ಷ, ವೀರಶೈವ ಲಿಂಗಾಯಿತ 10 ಲಕ್ಷ, ಒಕ್ಕಲಿಗ 61 ಲಕ್ಷ, ಪರಿಶಿಷ್ಟ ಜಾತಿ ಒಂದು ಕೋಟಿ, ಪರಿಶಿಷ್ಟ ಪಂಗಡ 42 ಲಕ್ಷ, ಕುರುಬರು 44 ಲಕ್ಷ, ಬಣಜಿಗ 10 ಲಕ್ಷ, ಕ್ರಿಶ್ಚಿಯನ್ 9 ಲಕ್ಷ ಜನಸಂಖ್ಯೆ ಇದೆ.
ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವುದರಿಂದ ಪ್ರವರ್ಗ 2 ಬಿ ಅಡಿ ಕೇವಲ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಶೇಕಡ 4ರಷ್ಟು ಮೀಸಲಾತಿಯನ್ನು ಶೇಕಡ 8ಕ್ಕೆ ಹೆಚ್ಚಳ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಪರಿಶಿಷ್ಟ ಜಾತಿಯಲ್ಲಿ 1.09 ಕೋಟಿ ಶೇಕಡ 18.27ರಷ್ಟು ಜನಸಂಖ್ಯೆ ಇದ್ದರೂ ಈ ಪ್ರವರ್ಗದ ಆಡಿ 101 ಜಾತಿಗಳು ಇರುವುದರಿಂದ ಏಕ ಜಾತಿಯಾಗಿ ಮುಸ್ಲಿಂ ಸಂಖ್ಯೆಗೆ ಹೆಚ್ಚು ಎಂದು ಹೇಳಲಾಗಿದೆ.
ಪರಿಶಿಷ್ಟ ಪಂಗಡದಲ್ಲಿ 49 ಜಾತಿಗಳಿದ್ದು 42.81 ಲಕ್ಷ ಜನಸಂಖ್ಯೆ ಇದೆ. ಲಿಂಗಾಯತ ಜಾತಿಯ ಜನಸಂಖ್ಯೆ ಹೆಚ್ಚಾಗಿದ್ದರೂ ಸಮೀಕ್ಷೆಯಲ್ಲಿ ಲಿಂಗಾಯತರನ್ನು ಎರಡು ಜಾತಿಗಳಾಗಿ ವಿಂಗಡಿಸಲಾಗಿದೆ. ಲಿಂಗಾಯತ ಸಮುದಾಯ 66 ಲಕ್ಷ, ವೀರಶೈವ ಲಿಂಗಾಯಿತರು 10 ಲಕ್ಷ ಜನಸಂಖ್ಯೆ ಹೊಂದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ಲಿಂಗಾಯಿತ ಮತ್ತು ಉಪಜಾತಿಗಳನ್ನು ಒಳಗೊಂಡ ಪ್ರವರ್ಗ 3ಬಿ ಅಡಿ 81 ಲಕ್ಷ ಮಂದಿ, ಕುರುಬರು ಸೇರಿದಂತೆ ವಿವಿಧ ಸಮುದಾಯ ಇರುವ ಪ್ರವರ್ಗ 2 ಎ ಅಡಿ 77.78 ಲಕ್ಷ, ಒಕ್ಕಲಿಗ ಮತ್ತು ಉಪಜಾತಿ ಇರುವ 3ಎ ಅಡಿ 72.99 ಲಕ್ಷ ಜನಸಂಖ್ಯೆ ಇರುವುದಾಗಿ ಹೇಳಲಾಗಿದೆ.
ಅತಿ ಹಿಂದುಳಿದ ವರ್ಗಗಳ ಪ್ರವರ್ಗ 1ಎ ಅನ್ನು 2 ಪ್ರವರ್ಗಗಳಾಗಿ ವಿಂಗಡಿಸಲಾಗಿದೆ. ಪ್ರವರ್ಗ 2ಎ ಅಡಿಯಲ್ಲಿದ್ದ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ 1ರ ವ್ಯಾಪ್ತಿಗೆ ತಂದು ಪ್ರವರ್ಗ 1 ಎ ಮತ್ತು ಪ್ರವರ್ಗ 1 ಬಿ ಎಂದು ಹೆಚ್ಚುವರಿ ವರ್ಗೀಕರಣ ಮಾಡಿದ್ದು, ಎರಡೂ ಸೇರಿ 1.07 ಕೋಟಿ ಜನಸಂಖ್ಯೆ ಹೊಂದಿದ್ದಾರೆ ಎನ್ನಲಾಗಿದೆ.