ಬೆಂಗಳೂರು: ಜಾತಿಗಣತಿ ಬಗ್ಗೆ ನಾಳೆ ಸಭೆ ಕರೆಯಲಾಗಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿಗಣತಿ ವರದಿ ವಿಚಾರವಾಗಿ ನಾಳೆ ವಿಧಾನಸೌಧದಲ್ಲಿ ಸಭೆ ಕರೆಯಲಾಗಿದೆ. ನಿಜವಾಗಿಯೂ ಅದು ಜಾತಿ ಗಣತಿಯೇ ಅಲ್ಲ. ಅದು ಸಾಮಾಜಿಕ, ಆರ್ಥಿಕ ಸಮೀಕ್ಷೆ ಅಷ್ಟೇ ಎಂದು ಹೇಳಿದರು.
ನಾಳೆ ನಡೆಯಲಿರುವ ಸಭೆಯಲ್ಲಿ ಸಚಿವರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇದೊಂದು ಆರ್ಥಿಕ ಸಮೀಕ್ಷೆ ಅಷ್ಟೇ ಎಂದು ತಿಳಿಸಿದರು.
ಜಾತಿಗಣತಿ ವರದಿ ಬಗ್ಗೆ ವಿವಿಧ ಸಮುದಾಯಗಳ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಜಾತಿಗಣತಿ ವರದಿ ಜಾರಿ ಮಾಡಿದರೆ ಸರ್ಕಾರ ಉರುಳಲಿದೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದ್ದು, ನಾಳಿನ ಸಭೆಯಲ್ಲಿ ಜಾತಿಗಣತಿ ವರದಿ ಬಗ್ಗೆ ಯಾವ ನಿರ್ಧಾರ ಹೊರಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.