ಬೆಂಗಳೂರು: ಊಟಕ್ಕೆಂದು ವಿದ್ಯಾರ್ಥಿನಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥನ ವಿರುದ್ಧ ತಿಲಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 25 ರಂದು ಜಯನಗರ 9ನೇ ಬ್ಲಾಕ್ ನ ಕಾರ್ಪೊರೇಷನ್ ಕಾಲೋನಿಯಲ್ಲಿ ಘಟನೆ ನಡೆದಿದೆ. 19 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಂಜೀವ್ ಕುಮಾರ್ ಮಂಡಲ್(45) ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ,
ವಿದ್ಯಾರ್ಥಿನಿ ನಗರದ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಪದವಿ ಓದುತ್ತಿದ್ದಾರೆ. ಸೆ. 25ರಂದು ಮಧ್ಯಾಹ್ನ ಸಂಜೀವ್ ಕುಮಾರ್ ಮನೆಯಲ್ಲಿ ಪತ್ನಿ, ಮಕ್ಕಳು ಇದ್ದಾರೆ. ಊಟಕ್ಕೆ ಹೋಗೋಣ ಬಾ ಎಂದು ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಮನೆಯಲ್ಲಿ ಪತ್ನಿ, ಮಕ್ಕಳು ಇರಲಿಲ್ಲ.
ಈ ವೇಳೆ ಸಂಜೀವ್ ಕುಮಾರ್, ಕಾಲೇಜಿನಲ್ಲಿ ನಿನ್ನ ಹಾಜರಾತಿ ಕಡಿಮೆ ಇದೆ ಎಂದು ಆಕೆಯ ಭುಜದ ಮೇಲೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ. ನಿನಗೆ ಹಾಜರಾತಿ ಹೆಚ್ಚು ಮಾಡುತ್ತೇನೆ. ಹೆಚ್ಚು ಅಂಕ ಕೊಡುತ್ತೇನೆ ಎಂದು ಲೈಂಗಿಕ ಕಿರುಕುಳ ನೀಡಿದ್ದಾರೆ. ಮನೆಗೆ ತೆರಳಿದ ವಿದ್ಯಾರ್ಥಿನಿ ಘಟನೆ ಬಗ್ಗೆ ಕುಟುಂಬದವರಿಗೆ ವಿಷಯ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.