ಮಂಗಳೂರು: ಬಜರಂಗದಳ ಮುಖಂಡ ಭರತ್ ಕುಮ್ಡೇಲು ಸೇರಿದಂತೆ ಹಲವರ ವಿರುದ್ಧ ಕೋಕಾ ಕಾಯ್ದೆ(ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಬಳಕೆ ಮಾಡಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಆರೋಪಿಗಳಾಗಿರುವ ಭರತ್ ಸೇರಿ ಹಲವರ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಮೇ 27ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೀಪಕ್, ಚಿಂತನ್, ಪೃಥ್ವಿರಾಜ್, ಸುಮಿತ್ ಆಚಾರ್ಯ, ರವಿರಾಜ ಮೂಲ್ಯ, ಅಭಿನಯ್, ಸಂಜಯ್, ಶಿವಪ್ರಸಾದ್ ತುಂಬೆ, ಪ್ರದೀಪ್, ಶಾಹಿದ್, ಸಚಿನ್ ರೊಟ್ಟಿಗುಡ್ಡೆ, ರಂಜಿತ್ ಅವರನ್ನು ಬಂಧಿಸಿದ್ದರು, ಈ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ,
ಪ್ರಮುಖ ಆರೋಪಿ ಭರತ್ ರಾಜ್ ತಲೆಮರೆಸಿಕೊಂಡಿದ್ದು, ಆತನ ಬಂಧನ ಬಾಕಿ ಇದೆ. ಕೊಲೆ ಕೊಲೆ ಯತ್ನ, ಪ್ರಚೋದನಾಕಾರಿ ಭಾಷಣ ಸಹಿತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಆರೋಪಿಗಳು ಹಲವು ವರ್ಷಗಳಿಂದ ಪಾಲ್ಗೊಂಡಿದ್ದು, ಸಮಾಜದಲ್ಲಿ ಅಶಾಂತಿ, ಕೋಮು ಸಂಘರ್ಷಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.