ಚಿಕ್ಕಮಗಳೂರು: ಸಾಲ ಮರುಪಾವತಿ ಮಾಡಿದರೂ ಮೂಲ ದಾಖಲೆಪತ್ರಗಳನ್ನು ನೀಡಲು ಬ್ಯಾಂಕ್ ವ್ಯವಸ್ಥಾಪಕರು ಸತಾಯುತ್ತಿರುವುದಾಗಿ ಚಿಕ್ಕಮಗಳೂರಿನ ಕೆನರಾ ಬ್ಯಾಂಕ್ ವ್ಯವಸ್ಥಾಕರ ವಿರುದ್ಧ ಗ್ರಾಹಕರು ದೂರು ನೀಡಿದ್ದಾರೆ.
ಇಲ್ಲಿನ ಬಾಳೆಹೊನ್ನೂರು ಬ್ಯಾಂಕ್ ನ ಸಿಬ್ಬಂದಿ, ಸಾಲ ಮರುಪಾವತಿ ಮಾಡಿ ಎರಡು ವರ್ಷಗಳು ಕಳೆದರೂ ಸಾಲ ಪಡೆಯಲು ಅಡವಿಟ್ಟಿದ್ದ ಮೂಲ ದಾಖಲೆಪತ್ರಗಳನ್ನು ವಾಪಸ್ ಕೊಡಲು ವಿಳಂಬ ಮಾಡುತ್ತಿದ್ದಾರೆ ಎಂದು ಕೊಪ್ಪದ ಹೇರೂರು ಗ್ರಾಮದ ವೀಣಾ ಕೃಷ್ಣಾ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ದಾಖಲಾತಿ ಪತ್ರ ನೀಡುವಂತೆ ಮನವಿ ಮಾಡಿದರೂ ಬ್ಯಾಂಕ್ ವ್ಯವಸ್ಥಾಪಕರು ದಿನಕ್ಕೊಂದು ನೆಪ ಹೇಳಿ ಮುಂದೂಡುತ್ತಲೇ ಇದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಸಾಲ ಮರುಪಾವತಿಯಾದ ಒಂದು ತಿಂಗಳ ಒಳಗೆ ಅಡವಿಟ್ಟ ಮೂಲ ದಾಖಲೆಗಳನ್ನು ಸಾಲಗಾರರಿಗೆ ಹಿಂತಿರುಗಿಸಬೇಕು. ಒಂದು ತಿಂಗಳ ಒಳಗಾಗಿ ದಾಖಲೆ ನೀಡದಿದ್ದಲ್ಲಿ ಪ್ರತಿ ದಿನಕ್ಕೆ 5 ಸಾವಿರ ರೂನಂತೆ ದಂಡ ಪಾವತಿಸಬೇಕು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ದಾಖಲಾತಿಗಳನ್ನು ವಾಪಸ್ ನೀಡದ ಬ್ಯಾಂಕ್ ವ್ಯವಸ್ಥಾಪಕರು ಎರಡು ವರ್ಷಗಳ ದಂಡ ಪಾವತಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.