ಚಿಕ್ಕಮಗಳೂರು: ಚುನಾವಣಾ ಅಕ್ರಮ, ಮತಗಳ್ಳತನದ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಮುಂದಾಗಿದ್ದು, ಕೈ ನಾಯಕರ ಪ್ರತಿಭಟನೆಗೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಸುಳ್ಳರು, ಕಳ್ಳರು ಜಾಸ್ತಿ ಸೌಂಡ್ ಮಾಡ್ತಾರೆ. ರಾಹುಲ್ ಗಾಂಧಿ ಒಬ್ಬ ಮಿಸ್ ಗೈಡೆಡ್ ಲೀಡರ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರ ರಿಮೋಟ್ ಎಲ್ಲೋ ಇದೆ. ಆ ರಿಮೋಟಿಗೆ ತಕ್ಕಂತೆ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಅಕ್ರಮ ಎಂಬುದು ಸುಳ್ಳು ಆರೋಪ. ಆಧಾರರಹಿತ ಆರೋಪ ಮಾಡಬಾರದು. ಇವರ ಬಳಿ ಆಧಾರವಿದ್ದರೆ ದೂರು ನೀಡಬೇಕು. ಈವರೆಗೂ ಯಾವುದೇ ದೂರು ನೀಡದೇ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಪ್ರತಿಭಟನೆಯೇ ಒಂದು ನಾಟಕ. ಮತಗಳ್ಳತನದ ಬಗ್ಗೆ ಆಧಾರವಿದ್ದರೆ ದೂರು ಕೊಡುತ್ತಿದ್ದರು. ಅದನ್ನು ಬಿಟ್ಟು ಬೀದಿಯಲ್ಲಿ ದೊಂಬರಾಟ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.