ಮುಂಬೈ: ಮುಂಬೈನ 72 ವರ್ಷದ ಉದ್ಯಮಿ ಮತ್ತು ಅವರ ಪತ್ನಿಯನ್ನು 52 ದಿನಗಳವರೆಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ 58 ಕೋಟಿ ರೂ. ವಂಚಿಸಲಾಗಿದೆ.
ಸಿಬಿಐ, ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಡಿಜಿಟಲ್ ಅರೆಸ್ಟ್ ಮೂಲಕ ವಂಚನೆ ಎಸಗುವ ಸೈಬರ್ ಖದೀಮರಿಂದ ಎಚ್ಚರವಾಗಿರಿ ಎನ್ನುವ ಜಾಗೃತಿ ನಡುವೆಯೂ ಉದ್ಯಮಿಯೊಬ್ಬರು 58 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ದೇಶದಲ್ಲಿ ಡಿಜಿಟಲ್ ಅರೆಸ್ಟ್ ಮೂಲಕ ವ್ಯಕ್ತಿಯೊಬ್ಬರು ಕಳೆದುಕೊಂಡ ಅತ್ಯಂತ ದೊಡ್ಡ ಮೊತ್ತ ಇದಾಗಿದೆ.
ಖದೀಮರು 18 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಸೈಬರ್ ಇಲಾಖೆ ತನಿಖೆ ನಡೆಸುತ್ತಿದೆ. ಮಲಾಡ್ ಪತನ್ ವಾಡಿಯ ಅಬ್ದುಲ್ ನಾಸಿರ್ ಕುಲ್ಲಿ(47), ಮಲಾಡ್ ಉಪನಗರದ ಅರ್ಜುನ್ ಕಡ್ವಾಸರ್(55) ಮತ್ತು ಆತನ ಸಹೋದರ ಮುಂಬೈ ಸೆಂಟ್ರಲ್ ನ ಸೀತಾರಾಮ್(35) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಲ್ಲಿ ಇಬ್ಬರು ತಮ್ಮ ಹೆಸರು ಸುಬ್ರಹ್ಮಣ್ಯ ಮತ್ತು ಕರಣ್ ಶರ್ಮಾ. ತಾವು ಇಡಿ ಮತ್ತು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ಆಗಸ್ಟ್ 19ರಂದು ಉದ್ಯಮಿ ದಂಪತಿಗೆ ಕರೆ ಮಾಡಿದ್ದಾರೆ. ನಂತರ ವಿವಿಧ ಸಿಮ್ ಕಾರ್ಡ್ ಬಳಸಿ ಬೇರೆ ಬೇರೆ ಮೊಬೈಲ್ ನಂಬರ್ ಮೂಲಕ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ನಿಮ್ಮ ಖಾತೆಗಳಲ್ಲಿ ಅಕ್ರಮವಾಗಿ ಹಣ ಇಟ್ಟಿದ್ದೀರಿ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ ಹೆಸರಿದ್ದು, ಡಿಜಿಟಲ್ ಅರೆಸ್ಟ್ ಮಾಡುತಿದ್ದೇವೆ ಎಂದು ಬೆದರಿಸಿದ್ದಾರೆ.
ನಕಲಿ ದಾಖಲೆಗಳ ಮೂಲಕ ತಾವು ಸಿಬಿಐ ಅಧಿಕಾರಿಗಳೆಂದು ದಂಪತಿಯನ್ನು ನಂಬಿಸಿ ನಿಮ್ಮ ಬಳಿ ಇರುವುದು ಅಕ್ರಮ ಹಣವೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಆ ಹಣವನ್ನು ನಾವು ಹೇಳಿದ ಖಾತೆಗೆ ವರ್ಗಾವಣೆ ಮಾಡಿ ಪರಿಶೀಲನೆ ಬಳಿಕ ವಾಪಸ್ ನೀಡುತ್ತೇವೆ ಎಂದು ವಂಚಿಸಿದ್ದಾರೆ. ಕೊನೆಗೆ ವಂಚನೆಗೊಳಗಾದ ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.