ಬೆಂಗಳೂರು: ಖಾಸಗಿ ಬಸ್ ನಲ್ಲಿ ಅಪ್ರಾಪ್ತ ಬಾಲಕಿಗೆ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ಚಾಲಕನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಬಾಲಕಿ ಪೋಷಕರು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಸ್ ಚಾಲಕ ಆರೀಫ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
15 ವರ್ಷದ ಬಾಲಕಿಯೊಬ್ಬರು ನಿನ್ನೆ ರಾತ್ರಿ ಹೈದರಾಬಾದ್ ನಿಂದ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸಿದ್ದಳು. ಮೊಬೈಲ್ ಚಾರ್ಜ್ ಖಾಲಿಯಾದ ಕಾರಣ ಬಾಲಕಿ ಮನೆಗೆ ಕರೆ ಮಾಡಬೇಕು ನನ್ನ ಮೊಬೈಲ್ ಚಾರ್ಜ್ ಮಾಡಿಕೊಡಿ ಎಂದು ಬಸ್ ಚಾಲಕನ ಬಳಿ ಹೇಳಿದ್ದಳು. ಆತ ಮೊಬೈಲ್ ಚಾರ್ಜಿಗಿಟ್ಟಿದ್ದಾನೆ. ಕೆಲ ಸಮಯದ ಬಳಿಕ ಬಾಲಕಿ ಮೊಬೈಲ್ ತೆಗೆದುಕೊಂಡು ಹೋಗಲು ಬಂದಾಗ ತನಗೆ ಮುತ್ತುಕೊಡು ಮೊಬೈಲ್ ಕೊಡುತ್ತೇನೆ ಎಂದು ಕಿರುಕುಳ ನೀಡಿದ್ದಾನೆ. ಅಲ್ಲದೇ ಬಾಲಕಿ ಸೀಟ್ ಬಳಿ ಬಂದು ಪದೇ ಪದೇ ಕಿರುಕುಳ ನೀಡಿ ಹಿಂಸಿಸಿದ್ದಾನೆ.
ಇದರಿಂದ ಆಘಾತಕ್ಕೊಳಗಾದ ಬಾಲಕಿ ತನ್ನ ತಾಯಿಗೆ ಕರೆ ಮಾಡಿ ಬಸ್ ಚಾಲಕ ಕಿರುಕುಳ ನೀಡುತ್ತಿರುವುದಾಗಿ ಹೇಳಿದ್ದಾಳೆ. ಅಲ್ಲದೇ ಹೈದರಾಬಾದ್ ನಲ್ಲಿರುವ ಆಕೆಯ ಸಹೋದರಿಗೂ ಕರೆ ಮಾಡಿ ವಿಷಯ ತಿಳಿಸಿದ್ದಳು. ಇಂದು ಬೆಳಿಗ್ಗೆ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಗೆ ಬಸ್ ಬರುವುದನ್ನೇ ಕಾಯುತ್ತಿದ್ದ ಪೋಷಕರು ಚಾಲಕನನ್ನು ಕೆಳಗಿಳಿಸಿ ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.