ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಸಹೋದರ ವಿನೋದ್ ಸೆಹ್ವಾಗ್ ಅವರನ್ನು ಚಂಡಿಗಡ ಪೊಲೀಸರು ಬಂಧಿಸಿದ್ದಾರೆ.
ವಿನೋದ್ ಸೆಹ್ವಾಗ್ ವಿರುದ್ದ 7 ಕೋಟಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಪ್ರಕರಣದ ವಿಚಾರಣೆಗೆ ವಿನೋದ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರನ್ನು ತಲೆಮರೆಸಿಕೊಂಡ ಆರೋಪಿ ಎಂದು ಕೋರ್ಟ್ ಘೋಷಿಸಿತ್ತು. ಹೀಗಾಗಿ ಅವರನ್ನು ಚಂಡಿಗಡ ಮಣಿಮಾಜ್ರಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಿನೋದ್ ಹರ್ಯಾಣದ ರೋಹ್ಟಕ್ ನ ಬಹದ್ದೂರ್ ಗಢಬಳಿ ತಂಪು ಪಾನೀಯಗಳ ಕಾರ್ಖಾನೆ ನಡೆಸುತ್ತಿದ್ದಾರೆ. ಅವರು ಮತ್ತು ಅವರ ಪಾಲುದಾರರು ಮಾಡಿದ್ದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆಳವಣಿಗೆ ನಡೆದಿದೆ. ವಿನೋದ್ ಸೆಹ್ವಾಗ್ ಅವರ ಪಾಲುದಾರರು ಸೇರಿಕೊಂಡು ಹಿಮಾಚಲ ಪ್ರದೇಶದಲ್ಲಿರುವ ನೈನಾ ಪ್ಲಾಸ್ಟಿಕ್ ಕಾರ್ಖಾನೆಯಿಂದ ತಂಪು ಪಾನೀಯ ತುಂಬುವ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿದ್ದು, 7 ಕೋಟಿ ರೂ.ಗೆ ಪ್ರತಿಯಾಗಿ ತಲಾ ಒಂದು ಕೋಟಿ ರೂ.ಗಳ 7 ಬ್ಯಾಂಕ್ ಚೆಕ್ ಗಳನ್ನು ನೀಡಿತ್ತು. ಆದರೆ, ಹಣದ ಕೊರತೆಯಿಂದ ಚೆಕ್ ಬೌನ್ಸ್ ಆಗಿದ್ದವು.
ನೈನಾ ಕಂಪನಿ ವಿನೋದ್ ಮತ್ತು ಅವರ ಕಂಪನಿ ನಿರ್ದೇಶಕರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗಿತ್ತು. ಕೋರ್ಟ್ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ವಿನೋದ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿತ್ತು.