ಹಾವೇರಿ: ತಂದೆಯ ಸಾವಿನ ನೋವಿನಲ್ಲಿಯೂ ಅಣ್ಣ, ತಂಗಿ ಶುಕ್ರವಾರ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪದ್ಮಾವತಿಪುರ ತಾಂಡಾ ನಿವಾಸಿಗಳಾದ ಧನರಾಜ್ ಲಮಾಣಿ ಮತ್ತು ರಕ್ಷಿತಾ ಲಮಾಣಿ ಅವರು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಇವರ ತಂದೆ ಹನುಮಂತಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಂದೆಯ ನಿಧನದ ನೋವಿನಲ್ಲೂ ರಾಣೇಬೆನ್ನೂರು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಮಕ್ಕಳು ಹಿಂದಿ ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆ ದಿನಗಳಂದು ಹನುಮಂತಪ್ಪ ಅವರೇ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಬರುತ್ತಿದ್ದರು. ಆದರೆ ಪರೀಕ್ಷೆ ಮುಗಿಯುವ ಮೊದಲೇ ಅಕಾಲಿಕ ನಿಧನರಾಗಿದ್ದಾರೆ. ಮಾಹಿತಿ ತಿಳಿದ ಶಿಕ್ಷಣ ಇಲಾಖೆಯ ಸಿಬ್ಬಂದಿ ವಿದ್ಯಾರ್ಥಿಗಳ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.