ನೆಲಮಂಗಲ: ರಸ್ತೆಗೆ ಮಣ್ಣು ಹಾಕುವ ವಿಚಾರಕ್ಕೆ ಗಲಾಟೆಯಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೊಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೊಹಳ್ಳಿ ಗ್ರಾಮದಲ್ಲಿ ನಾಗರತ್ನಮ್ಮ ಎಂಬುವವರ ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಲಾಗಿದೆ.
ಪ್ರೇಮಕುಮಾರ್, ಜಯಮ್ಮ, ಮಹಿಮಗೌಡ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಕ್ಕೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ನಿರಂತರ ಮಳೆಯಿಂದಾಗಿ ಗ್ರಾಮದ ರಸ್ತೆ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಮಣ್ಣು ಹಾಕಿ ರಸ್ತೆ ಸರಿ ಮಾಡಲು ಗ್ರಾಮದ ಜನರು ಮುಂದಾಗಿದ್ದರು. ರಸ್ತೆ ದುರಸ್ತಿ ಮಾಡದಂತೆ ಕೆಲವರು ಉದ್ದೇಶಪೂರ್ವಕವಾಗಿ ತಡೆದಿದ್ದು, ವಿಡಿಯೋ ಮಾಡುವಾಗ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
