ಹಾಸನ: ಹಾಸನ ಜಿಲ್ಲೆ ಬೇಲೂರಿನ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ಅವಮಾನಿಸಿದ ಆರೋಪಿತ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಾಸನದ ಗುಡ್ಡೇನಹಳ್ಳಿ ಸಮೀಪ ಲೀಲಮ್ಮ ಎಂಬುವರನ್ನು ಪಿಎಸ್ಐ ಸುರೇಶ್, ಶೋಭಾ ನೇತೃತ್ವದ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಮಹಾಲಯ ಅಮಾವಾಸ್ಯೆ ದಿನ ಭಕ್ತರು ಬೇಲೂರಿನ ಶ್ರೀ ವಿದ್ಯಾ ಗಣಪತಿ ದೇವಸ್ಥಾನಕ್ಕೆ ತೆರಳಿದ ಸಂದರ್ಭದಲ್ಲಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ವಿಕೃತ್ತಿ ಮೆರೆದಿರುವುದು ಗೊತ್ತಾಗಿದೆ. ಶನಿವಾರ ರಾತ್ರಿ ಮಹಿಳೆಯೊಬ್ಬರು ಈ ರೀತಿ ಮಾಡಿದ್ದು ಘಟನೆ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದ್ದರು. ಅರ್ಚಕರು ಶುದ್ದೀಕಾರ್ಯ ಕೈಗೊಂಡಿದ್ದರು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಮಹಿಳೆಯನ್ನು ಗುರುತಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.