ಕೋಲಾರ: ಶಾಲೆಗೆ ಹೋಗಿದ್ದ ಇಬ್ಬರು ಸಹೋದರಿಯರು ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಬಾಲಕಿಯರು ಪತ್ತೆಯಾಗಿದ್ದಾರೆ. ಸಹೋದರಿಯರನ್ನು ಮುಳಬಾಗಿಲು ನಗರ ಪೊಲೀಸರು ಪತ್ತೆ ಮಾಡಿದ್ದಾರೆ. ಇಬ್ಬರು ಬಾಲಕಿಯರನ್ನು ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.
ಮೋನಿಕಾ(14), ತನುಶ್ರೀ(11) ಅವರನ್ನು ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆಯ ರಮೇಶ್ ಎಂಬುವರ ಪುತ್ತಿಯರಾಗಿರುವ ಮೋನಿಕಾ, ತನುಶ್ರೀ ಜ್ಞಾನವಾಹಿನಿ ಶಾಲೆಯಲ್ಲಿ ಓದುತ್ತಿದ್ದಾರೆ.
ಬೆಳಗ್ಗೆ ಶಾಲೆಗೆ ಹೋಗುವುದಾಗಿ ಮನೆಯಿಂದ ಹೋಗಿದ್ದ ಅವರು ಶಾಲೆಗೂ ಹೋಗದೇ ಮನೆಗೂ ಬಾರದೆ ನಾಪತ್ತೆಯಾಗಿದ್ದರು. ಪೋಷಕರು ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಮುಳಬಾಗಿಲು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಮುಳಬಾಗಿಲು ಟೌನ್ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಮೋನಿಕಾ ಮತ್ತು ಅವರ ತಂಗಿ ತನುಶ್ರೀಯನ್ನು ಪೊಲೀಸರು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.
