ಕಲಬುರಗಿ: ನಿನ್ನೆ ರಾತ್ರಿ ನಿಧನರಾದ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪರಿ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದ ಶರಣಬಸವಪ್ಪ ಅಪ್ಪ(90) ಅವರ ಕ್ರಿಯಾಸಮಾಧಿ ನೆರವೇರಿಸಲಾಗಿದೆ.
ಕಲಬುರಗಿಯ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ್ದ ಶರಣಬಸವಪ್ಪ ಅಪ್ಪ ಕ್ರಿಯಾ ಸಮಾಧಿ ನೆರವೇರಿಸಲಾಗಿದೆ. ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿವೆ.
ಪಂಚಾಚಾರ್ಯರ ಕಳಸ ಸ್ಥಾಪಿಸಿ ಸೋಮನಾಥ ಶಾಸ್ತ್ರಿ ಸ್ವಸ್ತಿ ಪುಣ್ಯ ವಾಚಿಸಿದ್ದಾರೆ. ಪಲ್ಲಕ್ಕಿಯಲ್ಲಿ ಶರಣಬಸವಪ್ಪ ಪಾರ್ಥಿವ ಶರೀರ ಇರಿಸಿ ಐದು ಸುತ್ತು ಪ್ರದಕ್ಷಿಣೆ ಹಾಕಲಾಗಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಶರಣಬಸವಪ್ಪ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆಯಲ್ಲಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಪತ್ನಿ ದಾಕ್ಷಾಯಿಣಿ ಎಸ್.ಅಪ್ಪ, ಪುತ್ರ ದೊಡ್ಡಪ್ಪ ಅಪ್ಪ ಹಾಗೂ ಕುಟುಂಬಸ್ಥರು, ಭಕ್ತರು ಇದ್ದರು.