ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಗ್ರೂಪ್ ಎ ಮತ್ತು ಬಿ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ತಂಬು ಗರ್ಭಿಣಿಗೆ ಕಲಬುರಗಿಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಹೈಕೋರ್ಟ್ ಏಕ ಸದಸ್ಯ ಪೀಠದಿಂದ ನಿರ್ದೇಶನ ನೀಡಲಾಗಿದೆ.
ಮಹಾಲಕ್ಷ್ಮಿ ಎಂಬುವರು ಕಲಬುರಗಿಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ತುಂಬು ಗರ್ಭಿಣಿ ಆಗಿರುವುದರಿಂದ ಧಾರವಾಡ, ಬೆಂಗಳೂರಿಗೆ ಬರಲು ಆಗುವುದಿಲ್ಲ. ಕಲಬುರಗಿಯಲ್ಲಿಯೇ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದರು.
ಆದರೆ, ಒಬ್ಬ ಅಭ್ಯರ್ಥಿಗಾಗಿ ಈ ವ್ಯವಸ್ಥೆಯನ್ನು ಕಲ್ಪಿಸಲು ಕರ್ನಾಟಕ ಲೋಕಸೇವಾ ಆಯೋಗ ವಿರೋಧಿಸಿತ್ತು. ಚುನಾವಣೆ, ಉಪಚುನಾವಣೆಗೆಂದು ತೆರಿಗೆ ಹಣ ವ್ಯರ್ಥವಾಗುತ್ತದೆ. ದೂರ ದೃಷ್ಟಿಯ ಕೊರತೆಯಿಂದ ಕೋಟ್ಯಂತರ ತೆರಿಗೆ ಹಣ ಖರ್ಚಾಗುತ್ತದೆ. ಗರ್ಭಿಣಿ ಅಭ್ಯರ್ಥಿಗಾಗಿ ಕಲಬುರಗಿಯಲ್ಲೇ ಪರೀಕ್ಷೆಗೆ ವ್ಯವಸ್ಥೆ ಮಾಡಿ ಎಂದು ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಮೂರ್ತಿ ಡಾ. ಚಿಲಕೂರು ಸುಮಲತಾ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.