ಮೈಸೂರು: ಚಲಿಸುತ್ತಿದ್ದ ಕಾರ್ ಮೇಲೆ ಲಾರಿ ಉರುಳಿ ಬಿದ್ದು ಒಬ್ಬರು ಸಾವನ್ನಪ್ಪಿದ್ದು, 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸಿಂಧುವಳ್ಳಿಪುರ ಗ್ರಾಮದ ಬಳಿ ನಡೆದಿದೆ.
ಕಾರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಮೈಸೂರಿನಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ಕಾರ್ ಮೇಲೆ ಲಾರಿ ಉರುಳಿ ಬಿದ್ದಿದೆ. ಅಪಘಾತದಲ್ಲಿ ಕಾರ್ ಚಾಲಕ ಮೃತಪಟ್ಟಿದ್ದು, ಆತನ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ನಂಜನಗೂಡು ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.