ಇಸ್ಲಾಮಾಬಾದ್: 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಅರೆಸೈನಿಕ ಸಿಬ್ಬಂದಿ ಸಾವನ್ನಪ್ಪಿದ ಮಾರಕ ದಾಳಿಯಲ್ಲಿ ಪಾಕಿಸ್ತಾನಿ ಸೇನೆಯ ಪಾತ್ರವನ್ನು ಪಾಕಿಸ್ತಾನಿ ವಾಯುಪಡೆಯ ಉನ್ನತ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.
ಹಲವು ವರ್ಷಗಳ ನಿರಾಕರಣೆಯ ನಂತರ ಅನಿರೀಕ್ಷಿತವಾಗಿ ಅವರು ಈ ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ, ಪಾಕಿಸ್ತಾನ ವಾಯುಪಡೆಯ ಸಾರ್ವಜನಿಕ ಸಂಪರ್ಕ ಮಹಾನಿರ್ದೇಶಕರಾದ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್, ಪುಲ್ವಾಮಾ ಬಾಂಬ್ ದಾಳಿಯನ್ನು “ಯುದ್ಧತಂತ್ರದ ಪ್ರತಿಭೆ”ಯ ಕೃತ್ಯ ಎಂದು ಬಣ್ಣಿಸಿದರು.
ಈ ತಪ್ಪೊಪ್ಪಿಗೆಯು ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವು ತಾನು ಮುಗ್ಧ ಎಂಬ ನಿರಂತರ ಹೇಳಿಕೆಗೆ ವಿರುದ್ಧವಾಗಿದೆ ಮತ್ತು ಪಹಲ್ಗಾಮ್ ಭಯೋತ್ಪಾದಕ ಘಟನೆಗೆ ಸಂಬಂಧಿಸಿದಂತೆ ಭಾರತದಿಂದ ಪುರಾವೆಗಳಿಗಾಗಿ ಅದರ ಇತ್ತೀಚಿನ ಬೇಡಿಕೆಗಳನ್ನು ದುರ್ಬಲಗೊಳಿಸಿದೆ.
ಪುಲ್ವಾಮಾದಲ್ಲಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ತಮ್ಮ “ಯುದ್ಧತಂತ್ರದ ಪ್ರತಿಭೆ” ಪ್ರದರ್ಶಿಸಿವೆ ಎಂದು ಡಿಜಿ ಐಎಸ್‌ಪಿಆರ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಮತ್ತು ನೌಕಾಪಡೆಯ ವಕ್ತಾರರೊಂದಿಗೆ ಔರಂಗಜೇಬ್ ಅಹ್ಮದ್ ಹೇಳಿದರು.
ಪಾಕಿಸ್ತಾನದ ವಾಯುಪ್ರದೇಶ, ಭೂಮಿ, ಜಲಪ್ರದೇಶ ಅಥವಾ ಅದರ ಜನರಿಗೆ ಬೆದರಿಕೆಯೊಡ್ಡಿದರೆ, ಯಾವುದೇ ರಾಜಿ ಸಾಧ್ಯವಿಲ್ಲ. ಯಾವುದೇ ಬೆಲೆ ತೆತ್ತಾದರೂ ಪಾಕಿಸ್ತಾನಿ ಜನರು ತಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೊಂದಿರುವ ಹೆಮ್ಮೆ ಮತ್ತು ನಂಬಿಕೆಯನ್ನು ನಾವು ಯಾವಾಗಲೂ ಎತ್ತಿಹಿಡಿಯುತ್ತೇವೆ. ಪುಲ್ವಾಮಾದಲ್ಲಿ ನಮ್ಮ ಯುದ್ಧತಂತ್ರದ ಪ್ರತಿಭೆಯ ಮೂಲಕ ನಾವು ಅದನ್ನು ತಿಳಿಸಲು ಪ್ರಯತ್ನಿಸಿದ್ದೇವೆ; ಈಗ, ನಾವು ನಮ್ಮ ಕಾರ್ಯಾಚರಣೆಯ ಪ್ರಗತಿ ಮತ್ತು ಕಾರ್ಯತಂತ್ರ ಪ್ರದರ್ಶಿಸಿದ್ದೇವೆ. ಅವರು ಗಮನ ಹರಿಸಬೇಕು ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ಪಾತ್ರ ನಿರಾಕರಿಸಿದೆ. ಜೈಶ್-ಎ-ಮೊಹಮ್ಮದ್(ಜೆಇಎಂ) ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಭಾರತವು ಆತ್ಮಾಹುತಿ ಬಾಂಬರ್ ಮತ್ತು ಬವಾಹಲ್‌ಪುರದಲ್ಲಿರುವ ಜೆಇಎಂ ಕೇಂದ್ರ ಕಚೇರಿಗೆ ಸಂಪರ್ಕ ಕಲ್ಪಿಸುವ ದಾಖಲೆಗಳನ್ನು ಒದಗಿಸಿದ್ದರೂ, ಪಾಕಿಸ್ತಾನವು ನಿರಂತರವಾಗಿ ಹೆಚ್ಚಿನ ಪುರಾವೆಗಳನ್ನು ಕೇಳಿ ಭಾರತದ ಆರೋಪಗಳನ್ನು ತಿರಸ್ಕರಿಸಿತ್ತು.