ಮಂಗಳೂರು: ಮಂಗಳೂರು ಹೊರವಲಯದ ವಳಚ್ಚಿಲ್ ನಲ್ಲಿ ತಡರಾತ್ರಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ.
ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ವಾಮಂಜೂರು ನಿವಾಸಿ ಸಲ್ಮಾನ್(50) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಚಾಕುವಿನಿಂದ ಇರಿದು ಸಂಬಂಧಿ ಮುಸ್ತಾಫ ಕೊಲೆ ಮಾಡಿದ್ದಾನೆ. ಸಲ್ಮಾನ್ ಅವರ ಇಬ್ಬರು ಪುತ್ರರ ಮೇಲೆ ಹಲ್ಲೆ ನಡೆಸಿ ಮುಸ್ತಾಫ ಪರಾರಿಯಾಗಿದ್ದಾನೆ.
ಸಲ್ಮಾನ್ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಅವರು ಗಾಯಗೊಂಡಿದ್ದಾರೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸಂಬಂಧಿಯಾಗಿದ್ದ ಮುಸ್ತಾಫನಿಗೆ ಸಲ್ಮಾನ್ ಮದುವೆ ಮಾಡಿಸಿದ್ದ. ಮದುವೆಯ ವೇಳೆ ಮುಸ್ತಾಫ ಮತ್ತು ಸಲ್ಮಾನ್ ನಡುವೆ ವೈಮನ್ಸು ಉಂಟಾಗಿತ್ತು. ಈ ವಿಚಾರವಾಗಿ ಮಾತನಾಡಬೇಕೆಂದು ಮುಸ್ತಾಫ ಸಲ್ಮಾನ್ ಅವರನ್ನು ಕರೆಸಿದ್ದ. ತನ್ನ ಇಬ್ಬರು ಪುತ್ರರೊಂದಿಗೆ ಮುಸ್ತಾಫ ಬಳಿ ಸಲ್ಮಾನ್ ಬಂದಿದ್ದರು. ಈ ವೇಳೆ ವಾಗ್ವಾದ ನಡೆದು ಸಲ್ಮಾನ್ ಗೆ ಮುಸ್ತಾಫ ಚಾಕುವಿನಿಂದ ಇರಿದಿದ್ದಾನೆ. ತಂದೆಯ ರಕ್ಷಣೆಗೆ ಬಂದ ಇಬ್ಬರು ಪುತ್ರರ ಮೇಲೆಯೂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ಮುಸ್ತಾಫನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.