ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ಸೈಲ್ ಅವರ ಮಧ್ಯಂತರ ಜಾಮೀನು ರದ್ದುಪಡಿಸಲಾಗಿದೆ.
ಬೆಲೇಕೇರಿ ಬಂದರಿನಿಂದ ಅಕ್ರಮ ಆದಿರು ಸಾಗಾಟ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿದ್ದ ಸತೀಶ್ ಸೈಲ್ ಅವರಿಗೆ ನವೆಂಬರ್ 7ರವರೆಗೆ ಜಾಮೀನು ವಿಸ್ತರಣೆ ಮಾಡಲಾಗಿತ್ತು. ಇಂದು ಅವರ ಜಾಮೀನು ರದ್ದು ಮಾಡಲಾಗಿದ್ದು, ಸತೀಶ್ ಸೈಲ್ ಮತ್ತೆ ಜೈಲು ಸೇರುವಂತಾಗಿದೆ.
ಅಕ್ರಮ ಅಧಿರು ಸಾಗಣೆ ಪ್ರಕರಣದಲ್ಲಿ ಶಾಸಕರು ಜೈಲು ಪಾಲಾಗಿದ್ದರು. ಅವರ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಇಡಿ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು. ಅಕ್ಟೋಬರ್ 25 ರವರೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಚಿಕಿತ್ಸೆ ಕಾರಣದಿಂದ ಜಾಮೀನು ವಿಸ್ತರಿಸುವಂತೆ ಅವರು ಮಾಡಿದ ಮನವಿಯನ್ನು ಪರಿಗಣಿಸಿ ನವೆಂಬರ್ 7ರವರೆಗೆ ಜಾಮೀನು ವಿಸ್ತರಿಸಲಾಗಿತ್ತು.
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ಹೈಕೋರ್ಟ್ ನಿಂದ ತಡೆಯಾಜ್ಞೆ ಪಡೆದುಕೊಂಡಿದ್ದರು. ಇಂದು ಜಾಮೀನು ರದ್ದುಪಡಿಸಿದ್ದು, ಮತ್ತೆ ಜೈಲು ಸೇರುವಂತಾಗಿದೆ ಎನ್ನಲಾಗಿದೆ.
