ಬೆಂಗಳೂರು: ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಡರಾತ್ರಿ ಸಿಟಿ ರೌಂಡ್ಸ್ ನಡೆಸಿದ್ದಾರೆ.
ರಾತ್ರಿ ಪ್ರಮುಖ ಜಂಕ್ಷನ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಜೆಸ್ಟಿಕ್ ಶಾಂತಲಾ ಜಂಕ್ಷನ್, ಚಾಮರಾಜಪೇಟೆ ಸಿಸಿಬಿ ಕಚೇರಿ ಜಂಕ್ಷನ್, ರಾಜಾಜಿನಗರ, ಯಶವಂತಪುರ ಹೆಚ್ಎಂಟಿ ರೋಡ್ ಸೇರಿ ನಗರದ ಕೆಲವು ಜಂಕ್ಷನ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಕಾಬಂಧಿ ಕಾರ್ಯದ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಮಾಹಿತಿ ನೀಡಿದ್ದಾರೆ. ನಾಕಾಬಂಧಿ ಹಾಕಿರುವ ಜಂಕ್ಷನ್ ಗಳಿಗೆ ಭೇಟಿ ನೀಡಿ ಸೀಮಂತ್ ಕುಮಾರ್ ಸಿಂಗ್ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಭದ್ರತಾ ಸಿಬ್ಬಂದಿ ಕಾರ್ಯವಿಧಾನದ ಮಾಹಿತಿ ಪಡೆದು, ರಾತ್ರಿ ವೇಳೆ ಮಳೆ, ಚಳಿ ಹಿನ್ನೆಲೆ ಸಿಬ್ಬಂದಿಗೆ ಜಾಕೆಟ್ ಹಾಗೂ ಕೊಡೆಗಳನ್ನು ಒದಗಿಸಲು ಸೂಚನೆ ನೀಡಿದ್ದಾರೆ.
ಹೊಯ್ಸಳ ವಾಹನ ಸಿಬ್ಬಂದಿ ಚೆಕ್ಪೋಸ್ಟ್ ಭದ್ರತೆಗೆ ನಿಯೋಜನೆ ಕಡ್ಡಾಯ ಮಾಡಲಾಗಿದ್ದು, ಕಳೆದು ಒಂದು ವಾರದ ಹಿಂದೆಯಷ್ಟೇ ಕಮಿಷನ್ ಆದೇಶ ಹೊರಡಿಸಿದ್ದಾರೆ. ಕೇವಲ ಬೀಟ್ ಅಲ್ಲದೇ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಬೇಕು.
112 ಕರೆ ಬಂದು ಕಂಟ್ರೋಲ್ ರೂಮ್ ನಿಂದ ಮೊಮೆಂಟ್ ಇದ್ದಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟು ಪುನಃ ಚೆಕ್ ಪೋಸ್ಟ್ ಪಾಯಿಂಟ್ ರಸ್ತೆಗಳಲ್ಲಿ ಬೀಟ್ ಮಾಡುವ ಜೊತೆಗೆ ಭದ್ರತೆಗೆ ನಿಯೋಜಿಸಬೇಕು ಎಂದು ತಿಳಿಸಿದ್ದಾರೆ.
ವಾಹನಗಳ ಪರಿಶೀಲನೆ ಕಾರ್ಯವಿಧಾನದ ಪರಿಣಾಮಗಳ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ವೇಳೆ ಅನುಮಾನಾಸ್ಪದ ವಾಹನಗಳ ಓಡಾಟ, ಪುಂಡರ ಓಡಾಟ ಹಾಗೂ ಹೆಲ್ಮೆಟ್ ಧರಿಸದೇ ಓಡಾಡುವ ದ್ವಿಚಕ್ರ ವಾಹನಗಳ ಸವಾರರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದ್ದಾರೆ.
ಕಡ್ಡಾಯ ವಾಹನಗಳ ತಪಾಸಣೆಯ ಮೂಲಕ ಅಪರಾಧ ಪ್ರಕರಣಗಳ ತಡೆಗೆ ಒತ್ತು ನೀಡಲಾಗಿದೆ. ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳ ಕಡೆಗೆ ಒತ್ತು ನೀಡಿದ್ದು, ನಾಕಾಬಂಧಿ, ಇನ್ನು ಹೆಚ್ಚು ಭದ್ರತೆ ಒದಗಿಸುವ ಬಗ್ಗೆ ಪರಿಶೀಲಿಸಿದ್ದೇವೆ. ಅದಕ್ಕಾಗಿ ಡಿಸಿಪಿಗಳ ಜೊತೆಗೆ ವಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ಪೊಲೀಸ್ ಸಿಬ್ಬಂದಿ ಕೂಡ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಮಳೆ ಸುರಿಯುತ್ತಿದ್ದರೂ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು. ನಗರದ ಬೇರೆ ಬೇರೆ ಕಡೆ ನಾಕಾಬಂಧಿ ಹಾಕಿ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹೊಯ್ಸಳ ವಾಹನಗಳನ್ನು ರಾತ್ರಿ ರೌಂಡ್ಸ್ ಗೆ ಬಳಕೆ ಮಾಡುತ್ತಿದ್ದೇವೆ. 243ಕ್ಕೂ ಹೆಚ್ಚು ಹೊಯ್ಸಳ ವಾಹನಗಳ ಸಿಬ್ಬಂದಿ ಚೆಕ್ ಪೋಸ್ಟ್ ಗಳಲ್ಲಿಯೂ ನಾಕಾಬಂಧಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಜಾರಿಗೆ ತಂದಿದ್ದು ಪರಿಣಾಮಕಾರಿಯಾಗಿದೆ.