ಬೆಂಗಳೂರು: ಶಿವಮೊಗ್ಗ ತಾಲೂಕಿನ ಸಿದ್ಲೀಪುರದಲ್ಲಿ ಕಾರ್ಮಿಕ ಇಲಾಖೆ ಕಟ್ಟಡದ ಸಮೀಪ ಕಾರ್ಮಿಕರೊಬ್ಬರು ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿರುವ ಸುದ್ದಿಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಕಾರ್ಮಿಕ ಇಲಾಖೆ ವತಿಯಿಂದ ಇತ್ತೀಚೆಗೆ ನಿರ್ಮಾಣವಾಗಿರುವ ಸಂಚಾರಿ ವಸತಿ ಸಮುಚ್ಚಯದ ಕಟ್ಟಡ ಕುಸಿದು ಒರ್ವ ವ್ಯಕ್ತಿ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿರುವ ಸುದ್ದಿಯು ಅಪೂರ್ಣವಾದ ಅಂಶಗಳನ್ನು ಒಳಗೊಂಡಿದೆ ಎಂದು ಇಲಾಖೆ ತಿಳಿಸಿದೆ.
ಈಗ ಕುಸಿದಿರುವ ಕಟ್ಟಡ ಕಾರ್ಮಿಕ ಇಲಾಖೆ ನಿರ್ಮಿಸಿರುವ ವಸತಿ ಸಮುಚ್ಚಯವಲ್ಲ. ಬದಲಾಗಿ ವಸತಿ ಸಮುಚ್ಚಯ ನಿರ್ಮಾಣದ ಗುತ್ತಿಗೆದಾರರು ನಿರ್ಮಿಸಿಕೊಂಡಿದ್ದ ಒಂದು ತಾತ್ಕಾಲಿಕ ಕಟ್ಟಡವಾಗಿದೆ. ಅಲ್ಲದೆ ಈ ಕಟ್ಟಡದಲ್ಲಿ ಯಾರೂ ವಾಸವಿರಲಿಲ್ಲ ಎಂದು ವಿವರಿಸಿದೆ.
ಸದ್ಯ ಮೃತ ಹಾಗೂ ಗಾಯಗೊಂಡಿರುವ ವ್ಯಕ್ತಿಗಳು ಈ ಕಟ್ಟಡದ ಸಿಮೆಂಟ್ ಇಟ್ಟಿಗೆಗಳನ್ನು ಗುತ್ತಿಗೆದಾರರಿಗೆ ಯಾವುದೇ ಮಾಹಿತಿ ನೀಡದೆ ತೆರವು ಮಾಡಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ. ಇಟ್ಟಿಗೆಗಳನ್ನು ತೆರವು ಮಾಡುವಾಗ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಸಹ ತೆಗೆದುಕೊಂಡಿಲ್ಲ ಎಂದು ಇಲಾಖೆ ತಿಳಿಸಿದೆ.
