ಬೆಂಗಳೂರು: ಏಪ್ರಿಲ್ ೨೭ರಂದು ನಂದಿಹಳ್ಳಿಯಲ್ಲಿ ಆಯೋಜಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸಭೆ, ವಾರ್ಷಿಕ ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿ ಸಭೆಯನ್ನು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಕೋರಿಕೆಯ ಮೇರೆಗೆ ಬಿಸಿಲಿನ ತಾಪಮಾನದ ಕಾರಣ ಮುಂದೂಡಿಕೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದ ೨೦೨೫ರ ಏಪ್ರಿಲ್ ೨೭ ರಂದು ಆಯೋಜಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸಾಮಾನ್ಯ ಸಭೆ, ವಾರ್ಷಿಕ ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿ ಸಭೆಯನ್ನು ಹವಾಮಾನ್ಯ ವೈಪರಿತ್ಯ ಮತ್ತು ಬಿಸಿಲಿನ ತಾಪಮಾನ ಏರಿಕೆಯಾದ ಕಾರಣ, ಕಸಾಪ ಬಳ್ಳಾರಿ ಜಿಲ್ಲಾ ಘಟಕದವರು ಮುಂದೂಡುವಂತೆ ಕೋರಿದ್ದು, ಈ ಕುರಿತು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿಗಳ ತಜ್ಞ ಸಲಹೆಯನ್ನು ಕೇಳಿದಾಗ ಅವರೂ ಅದೇ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದ ಹಿನ್ನೆಲೆಯಲ್ಲಿ ಜೂನ್ ೨೨ರ ಭಾನುವಾರ ಸಂಡೂರಿನಲ್ಲಿ ನಡೆಸುವಂತೆ ಮುಂದೂಡಲಾಗಿದೆ.
ದಿನಾಂಕ ೨೧-೦೩-೨೦೨೫ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಳ್ಳಾರಿಯಲ್ಲಿ ೮೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಿತವಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ ೨೭ರ ಭಾನುವಾರದಂದು ಕಾರ್ಯಕಾರಿ ಸಮಿತಿ ಸಭೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೆಯ ವಾರ್ಷಿಕಾಧಿವೇಶನದ ವಾರ್ಷಿಕ ಸಾಮಾನ್ಯ ಸಭೆಯನ್ನು ಅದೇ ದಿನ ವಿಶೇಷ ಸಾಮಾನ್ಯ ಸಭೆಯನ್ನು ನಂದಿಹಳ್ಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು.
ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿದ್ದು ಏಪ್ರಿಲ್ ೪ರಂದು ನಿಯಮಾನುಸಾರವಾಗಿ ವಾರ್ಷಿಕ ಸಾಮಾನ್ಯ ಸಭೆಯ ತಿಳುವಳಿಕೆ ಪತ್ರ ಮತ್ತು ವಿಶೇಷ ಸಾಮಾನ್ಯ ಸಭೆಯ ತಿಳುವಳಿಕೆ ಪತ್ರವನ್ನು ಸಭೆ ಆಯೋಜಿತವಾಗುವದಕ್ಕಿಂತ ೨೧ದಿನಗಳ ಮೊದಲು ಹೊರಡಿಸಲಾಗಿತ್ತು.

