ಬೆಂಗಳೂರು: ನನಗೂ 63 ವರ್ಷ ಆಯ್ತು, ಇನ್ನು 8ರಿಂದ 10 ವರ್ಷ ರಾಜಕಾರಣ ಮಾಡಬಹುದು. ಹೊಸಬರಿಗೆ ಸೂಕ್ತ ಸ್ಥಾನಗಳು ಸಿಗಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಎಫ್.ಕೆ.ಸಿ.ಸಿ.ಐ. ಸಭಾಭವನದಲ್ಲಿ ನಡೆದ ಡಿ.ಕೆ ಶಿವಮಕುಮಾರ್ ಬಾಲ್ಯ, ಶೈಕ್ಷಣಿಕ ದಿನಗಳು ಹಾಗೂ ರಾಜಕೀಯ ಬೆಳವಣಿಗೆಯ ಹಾದಿಯನ್ನು ಪರಿಚಯಿಸುವ “A Symbol of Loyalty D K Shivakumar” ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನನ್ನ ಕ್ಷೇತ್ರದ ಜನರು ಪಕ್ಷದ ಅಭಿಮಾನಿಗಳಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಷಡ್ಯಂತ್ರ ಮಾಡಿ ಜೈಲಿಗೆ ಕಳಿಸಿದ ವೇಳೆ ಜನ ನನ್ನನ್ನು ಬೆಳೆಸಿದ್ದಾರೆ. ದೇವರು ವರ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ನಾನು ಸೋಲು ಒಪ್ಪಿಕೊಳ್ಳುತ್ತೇನೆ, ಟೀಕೆಗಳನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ನನ್ನ ವಿರೋಧಿಗಳು ಕಥೆ ಕಟ್ಟಿ ಆರೋಪ ಮಾಡ್ತಾರೆ. ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ರಾಜಕಾರಣ ನಿಂತ ನೀರಲ್ಲ, ಯಾವುದೂ ಶಾಶ್ವತವಲ್ಲ. ನಾನು ದೇವೇಗೌಡರ ಕುಟುಂಬದ ವಿರುದ್ಧವಾಗಿ ರಾಜಕಾರಣ ಮಾಡಿದ್ದೇನೆ. ಆದರೆ ಪಕ್ಷ ನಿಷ್ಠೆಗಾಗಿ ನಾನು ಕುಮಾರಸ್ವಾಮಿ ಜೊತೆ ಕೈಜೋಡಿಸಿದ್ದೇನೆ. ಆದರೂ ದುಡ್ಡು ಹೊಡೆಯಲು ಎಂದು ಮಾತನಾಡುತ್ತಾರೆ, ಮಾತನಾಡಿಕೊಳ್ಳಲಿ. ನನ್ನ ಬದುಕಿನ ಈ ಪುಸ್ತಕದಲ್ಲಿ ಶೇಕಡ 99 ರಷ್ಟು ಅಂಶಗಳು ಸತ್ಯವಾಗಿವೆ ಎಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.