ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಲ್ಕೋಳ ವೃತ್ತದಿಂದ ಡಿವಿಜಿ ವೃತ್ತದವರೆಗೆ 100 ಅಡಿ ದ್ವಿಪಥದ ರಸ್ತೆಗೆ ಮಾಜಿ ಮುಖ್ಯಮಂತ್ರಿ ದಿ. ‘ಎಸ್. ಬಂಗಾರಪ್ಪ ರಸ್ತೆ’ ಎಂದು ನಾಮಕರಣ ಮಾಡಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆ ಸರ್ಕಾರದ ಅಧಿಸೂಚನೆಯ ಅನ್ವಯ ರಸ್ತೆಗೆ ಬಂಗಾರಪ್ಪ ಹೆಸರಿಡಲು ಅನುಮೋದನೆ ನೀಡಲಾಗಿದೆ.
ಉಲ್ಲೇಖಿತ ಪ್ರಸ್ತಾವನೆಯಲ್ಲಿ ಕೋರಿರುವಂತೆ ಅಧಿಸೂಚನೆಯಲ್ಲಿನ ಮಾರ್ಗಸೂಚಿಗಳ ಅನ್ವಯ ಮತ್ತು ಪಡೆಯಲಾದ ವರದಿಗಳ ಆಧಾರದ ಮೇಲೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಲ್ಕೊಳ ವೃತ್ತದಿಂದ ಡಿವಿಜಿ ವೃತ್ತದವರೆಗಿನ ದ್ವಿಪಥ ರಸ್ತೆಗೆ ‘ಎಸ್. ಬಂಗಾರಪ್ಪ ರಸ್ತೆ’ ಎಂದು ನಾಮಕರಣ ಮಾಡಲು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದನ್ವಯ ಸರ್ಕಾರ ಅನುಮೋದನೆ ನೀಡಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

