ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (KASS) ಯನ್ನು ಅಕ್ಟೋಬರ್ 01, 2025 ರಿಂದ ಜಾರಿಗೆ ತರಲಾಗುವುದ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪರಿಶೀಲಿಸಿ, ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯು(KASS) ಅಕ್ಟೋಬರ್ 01, 2025 ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.
1. ಯೋಜನೆಗೆ ಸರ್ಕಾರಿ ನೌಕರರ ಮಾಸಿಕ ವಂತಿಕೆಯನ್ನು ಪಾವತಿಸುವ ಬಗ್ಗೆ:
a. ಮಾಸಿಕ ವಂತಿಕೆಯನ್ನು ಪಾವತಿಸುವ ವಿಧಾನ: ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಎಲ್ಲಾ ಡಿಡಿಓಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಈ ಉದ್ದೇಶಕ್ಕಾಗಿಯೇ ತೆರೆಯಲಾದ ಬ್ಯಾಂಕ್ ಖಾತೆಗೆ ಖಜಾನೆ-2 ರಲ್ಲಿ ಸೃಜಿಸಲಾಗುವ ಸ್ವೀಕೃತಿದಾರರ ಐಡಿ (ID) ಗೆ ಜಮಾ ಮಾಡತಕ್ಕದ್ದು. (ಬ್ಯಾಂಕ್ ಖಾತೆ ವಿವರಗಳನ್ನು ಡಿಡಿಓಗಳಿಗೆ HRMS ಮುಖಾಂತರ ತಿಳಿಸಲಾಗುವುದು).
b. ಸರ್ಕಾರಿ ನೌಕರನ ಪತಿ ಅಥವಾ ಪತ್ನಿ ಕೂಡ ಸರ್ಕಾರಿ ನೌಕರರಾಗಿರುವಲ್ಲಿ ವಂತಿಕೆಯನ್ನು ಪಾವತಿಸುವ ಬಗ್ಗೆ: ವಂತಿಕೆಯನ್ನು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಪಾವತಿಸುವ ಬಗ್ಗೆ ಸಂಬಂಧಪಟ್ಟ ಸರ್ಕಾರಿ ನೌಕರರೇ ತೀರ್ಮಾನಿಸಿ ಸಂಬಂಧಿಸಿದ ಡಿಡಿಒ ರವರಿಗೆ ಮಾಹಿತಿ ನೀಡುವುದು.
c. HRMS ವ್ಯಾಪ್ತಿಯಲ್ಲಿರದ (ಬೇರೆ ಇಲಾಖೆಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯೋಜನೆ, ಅನ್ಯ ಸೇವೆ) ರಾಜ್ಯ ಸರ್ಕಾರಿ ನೌಕರರ ವಂತಿಕೆ ಕಟಾವಣೆ: ಅಂತಹ ನಿಯೋಜಿತ ನೌಕರರ ಮಾಸಿಕ ವೇತನದಲ್ಲಿ ವಂತಿಕೆಯನ್ನು ಕಟಾಯಿಸಿ, ಸಂಸ್ಥೆಯಿಂದ ನೇರವಾಗಿ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದು.
d. ವಂತಿಕೆ ಕಟಾವಣೆ ಪ್ರಾರಂಭಿಸುವುದು: ಯೋಜನೆಗೆ ಮಾಸಿಕ ವಂತಿಕೆಯನ್ನು ಮೇ 2025 ರಿಂದ ಸ್ವಯಂಚಾಲಿತವಾಗಿ ಕಟಾಯಿಸಲಾಗುವುದೆಂದು ಮೇಲೆ ಓದಲಾದ (6)ರ ದಿನಾಂಕ: 19.04.2025 ರ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ಅಂಶವನ್ನು ಮಾರ್ಪಡಿಸಿ ವಂತಿಕೆಯನ್ನು ಅಕ್ಟೋಬರ್ 2025ರ ವೇತನದಿಂದ ಮುಂದಿನಂತೆ ಕಟಾಯಿಸುವುದು.





