ಕೊಪ್ಪಳ: ಬಿಇಒ ಕಚೇರಿ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಎಫ್ಡಿಎ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎದುರು ಆತ್ಮಹತ್ಯೆಗೆ ಯತ್ನಿಸಲಾಗಿದೆ. ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸುಂಕಪ್ಪ ಕೊರವರ(45) ಆತ್ಮಹತ್ಯೆಗೆ ಯತ್ನಿಸಿದವರು. ಕೊಪ್ಪಳದ ಬಿಇಒ ಕಚೇರಿಯಲ್ಲಿ ಸುಂಕಪ್ಪ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ 7 ತಿಂಗಳನಿಂದ ಕರ್ತವ್ಯಕ್ಕೆ ಗೈರಾಗಿದ್ದರಿಂದ ವೇತನ ನೀಡಿರಲಿಲ್ಲ. ಮದ್ಯವ್ಯಸನಿಯಾಗಿದ್ದ ಸುಂಕಪ್ಪ ಜೀವನ ನಿರ್ವಹಣೆ ಕಷ್ಟವಾಗಿತ್ತು. ವೇತನ ಕೇಳಲು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿದ್ದ ಸುಂಕಪ್ಪ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗಾಯಾಳು ಸುಂಕಪ್ಪನನ್ನು ಕಚೇರಿಯ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಶೇಕಡ 80ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಸುಂಕಪ್ಪ ಅವರಿಗೆ ಚಿಕಿತ್ಸೆ ನೀಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಕೊಪ್ಪಳ ನಗರ ಠಾಣೆ ಪೊಲೀಸರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.