ಬೆಂಗಳೂರು: ಮತಗಳ್ಳತನ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದಿಂದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಲಾಗಿದೆ.
ತಮ್ಮ ಆರೋಪಗಳಿಗೆ ದಾಖಲೆ ಒದಗಿಸುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಆಗಸ್ಟ್ 7ರಂದು ರಾಹುಲ್ ಗಾಂಧಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಮರುದಿನ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮತಗಳ್ಳತನದ ಬಗ್ಗೆ ಆರೋಪ ಮಾಡಿದ್ದರು.
ಮಹದವೇಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11,965 ಮಂದಿ ನಕಲಿ ಮತದಾರರು ಮತಚಲಾವಣೆ ಮಾಡಿದ್ದಾರೆ. ಒಬ್ಬನೇ ಮತದಾರ ನಾಲ್ಕಾರು ಮತಗಟ್ಟೆಗಳಲ್ಲಿ ಮತ ಚಲಾಯಿಸಿರುವುದು, ಒಬ್ಬನೇ ಮತದಾರ ಈ ಕ್ಷೇತ್ರದ ಜೊತೆ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿ ಕೂಡ ಮತ ಚಲಾವಣೆ ಮಾಡಿರುವುದು. ಹೀಗೆ ಮತದಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳಲಾಗಿದೆ.
ಒಟ್ಟು 40,009 ಮಂದಿ ನಕಲಿ ವಿಳಾಸ ಹೊಂದಿರುವ ಮತದಾರರನ್ನು ಈ ಕ್ಷೇತ್ರದಲ್ಲಿ ಪತ್ತೆ ಮಾಡಲಾಗಿದೆ. ಮನೆಯ ನಂಬರ್ ‘0’ ಎಂದು ನಮೂದಾಗಿರುವ ಸಾವಿರಾರು ವಿಳಾಸವೇ ಇಲ್ಲದ ಮತದಾರರು, ತಂದೆ ಮತ್ತು ಪತಿಯ ಹೆಸರು ಇರುವ ಜಾಗದಲ್ಲಿ ಅರ್ಥವೇ ಇಲ್ಲದಂತೆ ಮನಸೋಇಚ್ಛೆ ಇಂಗ್ಲೀಷ್ ಅಕ್ಷರಗಳನ್ನು ನಮೂದಿಸಿರುವುದು ಮತ್ತು ಅಸ್ತಿತ್ವದಲ್ಲಿ ಇಲ್ಲದ ವಿಳಾಸಗಳನ್ನು ನೀಡಿರುವುದು. ಹೀಗೆ ನಕಲಿ ವಿಳಾಸ ನೀಡಿ ಮತಗಳ್ಳತನ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.