ಬೆಂಗಳೂರು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ರೀತಿ ಕರ್ನಾಟಕದಲ್ಲಿಯೂ ನ್ಯಾಯಮೂರ್ತಿಗಳ ಆಸ್ತಿ ವಿವರ ಬಹಿರಂಗಪಡಿಸುವಂತೆ ಮನವಿ ಮಾಡಲಾಗಿದೆ.
ಈ ಕುರಿತಾಗಿ ಬೆಂಗಳೂರು ವಕೀಲರ ಸಂಘದಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗಿದೆ. ಸುಪ್ರೀಂ ಕೋರ್ಟ್ ನಿರ್ಧಾರದಂತೆ ಕರ್ನಾಟಕ ಹೈಕೋರ್ಟ್ ಸಹ ನಿರ್ಧಾರ ಕೈಗೊಳ್ಳಬೇಕು ಎಂದು ಪತ್ರ ಬರೆದು ಮನವಿ ಮಾಡಲಾಗಿದೆ. ರಾಜ್ಯದ ಎಲ್ಲಾ ನ್ಯಾಯಾಧೀಶರು ಆಸ್ತಿ ವಿವರ ಘೋಷಿಸಿಕೊಳ್ಳಬೇಕು. ಈ ಬಗ್ಗೆ ಪೂರ್ಣ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲು ವಕೀಲರ ಸಂಘ ಮನವಿ ಮಾಡಿದೆ.
ನ್ಯಾಯಾಂಗದಲ್ಲಿ ಪಾರದರ್ಶಕತೆ ಖಾತರಿಪಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ತೀರ್ಮಾನ ಕೈಗೊಂಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲ 30 ನ್ಯಾಯಮೂರ್ತಿಗಳು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು, ನ್ಯಾಯಮೂರ್ತಿಗಳ ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಸುಪ್ರೀಂ ಕೋರ್ಟ್ ನ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು.
ಆದರೆ ಈ ಆಸ್ತಿ ವಿವರ ಬಹಿರಂಗಪಡಿಸುವಿಕೆ ಸ್ವಯಂ ಪ್ರೇರಿತವಾಗಿದ್ದು, ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನ್ಯಾಯಮೂರ್ತಿಗಳ ಆಸ್ತಿ ವಿವರ ಬಹಿರಂಗಪಡಿಸಬೇಕೆಂದು ವಕೀಲರ ಸಂಘ ಮನವಿ ಮಾಡಿದೆ.