ಬೆಂಗಳೂರು : ಕನ್ನಡಿಗ ಸಮುದಾಯದ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದ ಮತ್ತು ಭಾಷಾ ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸಿದ ಆರೋಪದ ಮೇಲೆ ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದೂರು ದಾಖಲಿಸಿದೆ.
ಸೋನು ಅವರ ಹೇಳಿಕೆ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಾಧ್ಯತೆಯಿದೆ ಎಂದು ಕನ್ನಡ ಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್ವಿ) ಬೆಂಗಳೂರು ಘಟಕದ ಅಧ್ಯಕ್ಷ ಧರ್ಮರಾಜ್ ಎ ದೂರಿನಲ್ಲಿ ಆರೋಪಿಸಿದ್ದಾರೆ. ಗಾಯಕನ ಹೇಳಿಕೆಯನ್ನು “ಆಕ್ಷೇಪಾರ್ಹ, ವಿಭಜಕ ಮತ್ತು ಕೋಮು ಸೌಹಾರ್ದತೆಗೆ ಹಾನಿಕಾರಕ” ಎಂದು ಪರಿಗಣಿಸಲಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 352 (1), 351 (2) ಮತ್ತು 353 ರ ಅಡಿಯಲ್ಲಿ ದ್ವೇಷ, ಕ್ರಿಮಿನಲ್ ಮಾನಹಾನಿ ಮತ್ತು ಭಾಷಾ ಭಾವನೆಗಳನ್ನು ಕೆರಳಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯಕ್ಕೆ ತೀವ್ರ ನೋವನ್ನುಂಟು ಮಾಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಏಪ್ರಿಲ್ 25 ಮತ್ತು 26 ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಅವರನ್ನು ವಿದ್ಯಾರ್ಥಿಯೊಬ್ಬ ಕನ್ನಡದಲ್ಲಿ ಹಾಡಲು ಕೇಳಿದಾಗ ತಾಳ್ಮೆ ಕಳೆದುಕೊಂಡಿದ್ದರು.
ಗಾಯಕ ಸೋನು ನಿಗಮ್ ಇತ್ತೀಚೆಗೆ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ತಮ್ಮ ಪ್ರದರ್ಶನದ ಸಮಯದಲ್ಲಿ ತಾಳ್ಮೆ ಕಳೆದುಕೊಂಡು ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಏನಿದು ವಿವಾದ..?
ಸೋನು ನಿಗಮ್ ಅವರು, ಕನ್ನಡ ಹಾಡುಗಳು ಎಂದರೆ ತುಂಬ ಇಷ್ಟ. ಕರ್ನಾಟಕ ಎಂದರೆ ತುಂಬ ಇಷ್ಟ ಎಂದು ಹೇಳುತ್ತಾರೆ. ಅದೇ ಸಮಯಕ್ಕೆ ಓರ್ವ ಹುಡುಗ ಕನ್ನಡದಲ್ಲಿ ಹಾಡಿ ಎಂದು ಗದರಿಸುವ ರೀತಿಯಲ್ಲಿ ಒತ್ತಾಯ ಮಾಡಿದ್ದಾನೆ. ಆಗ ಸೋನು ಅವರು ಪಹಲ್ಗಾಮ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.. ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಟೀಕೆಗಳಿಗೆ ಕಾರಣವಾಗಿದೆ. “ಓರ್ವ ಹುಡುಗ ನನಗೆ ಕನ್ನಡ ಹಾಡು ಹಾಡಿ ಎಂದ. ಅವನು ಹುಟ್ಟುವ ಮೊದಲಿನಿಂದಲೂ ನಾನು ಕನ್ನಡ ಹಾಡುಗಳನ್ನು ಹಾಡುತ್ತಿದ್ದೇನೆ. ಆದರೆ ಆ ಹುಡುಗ ‘ಕನ್ನಡ, ಕನ್ನಡ’ ಎಂದು ಒರಟಾಗಿ ಬೆದರಿಕೆ ಹಾಕಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣಕ್ಕೆ ಪಹಲ್ಗಾಮ್ನಲ್ಲಿ ಏನಾಯಿತು ಅಂತ ಗೊತ್ತಿದೆ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.
ಅವರು ಹುಟ್ಟುವ ಮೊದಲೇ ನಾನು ಕನ್ನಡ ಹಾಡುಗಳನ್ನು ಹಾಡಲು ಪ್ರಾರಂಭಿಸಿದ್ದೆ” ಎಂದು ಸೋನು ನಿಗಮ್ ಹೇಳಿದರು. “ಇದಕ್ಕಾಗಿಯೇ ಪಹಲ್ಗಾಮ್ ದಾಳಿ ನಡೆಯಿತು – ಅಂತಹ ವರ್ತನೆಗಾಗಿ. ಅಂತಹ ಬೇಡಿಕೆಗಳನ್ನು ಇಡುವ ಮೊದಲು ನಿಮ್ಮ ಮುಂದೆ ಯಾರು ಇದ್ದಾರೆ ಎಂದು ನೋಡಿ” ಎಂದು ಅವರು ವೇದಿಕೆಯಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.