ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಗೆ ಆಫ್ರಿಕನ್ ಹಂದಿ ಜ್ವರ ಕಾಲಿಟ್ಟಿದೆ. ಯಾರ್ಕ್ ಶೇರ್ ತಳಿಯ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ.
ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದ ಸಮೀಪ ಇರುವ ಫಾರ್ಮ್ ನಲ್ಲಿನ ಇರುವ ಹಂದಿಗಳಿಗೆ ಜ್ವರ ಇರುವುದು ದೃಢಪಟ್ಟಿದೆ. ಈಗಾಗಲೇ 100 ಹಂದಿಗಳು ಸಾವನ್ನಪ್ಪಿದ್ದು, 57 ಹಂದಿಗಳನ್ನು ಕೊಲ್ಲಲು ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಒಂದು ವಾರದಿಂದ ಫಾರ್ಮ್ ನಲ್ಲಿ ಹಂದಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭೋಪಾಲ್ ನ ರಾಷ್ಟ್ರೀಯ ಲ್ಯಾಬ್ ಗೆ ಸ್ಯಾಂಪಲ್ ಕಳುಹಿಸಲಾಗಿತ್ತು. ಅಲ್ಲಿಂದ ವರದಿ ಬಂದಿದೆ.
ಇಂದು ಬಂದಿರುವ ವರದಿಯಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಫಾರ್ಮ್ ನಿಂದ ಹಂದಿಗಳ ಸಾಗಾಟ, ಮಾರಾಟ ನಿಷೇಧಿಸಲಾಗಿದೆ. ಹಂದಿಗಳನ್ನು ಹೊಸಕೋಟೆಯ ಮೂಲಕ ನಾಗಾಲ್ಯಾಂಡ್ ಗೆ ರವಾನಿಸುತ್ತಿದ್ದರು. ಹಂದಿಗಳಿಗೆ ಆಫ್ರಿಕನ್ ಜ್ವರ ಹರಡುದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತ ಹಂದಿಗಳಿಂದ ಮನುಷ್ಯರಿಗೆ ರೋಗ ತಗುಲುವುದಿಲ್ಲ. ಆಫ್ರಿಕನ್ ಹಂದಿ ಜ್ವರದಿಂದ ಜನರಿಗೆ ಯಾವುದೇ ಆತಂಕ ಬೇಡ ಎಂದು ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ರಂಗಪ್ಪ ಮಾಹಿತಿ ನೀಡಿದ್ದಾರೆ.