ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 4 ವರ್ಷಗಳು ಕಳೆದಿದೆ.. ಪುನೀತ್ ರಾಜ್ ಕುಮಾರ್ ಅವರ 4 ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ, ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡೇ ಹರಿದು ಬಂದಿದೆ. ಇದೇ ವೇಳೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಮಗಳ ಜೊತೆ ಸೇರಿ ಪತಿಯ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಸೇರಿದಂತೆ ಕುಟುಂಬದವರು ಉಪಸ್ಥಿತರಿದ್ದರು.
ಅಪ್ಪುಗೆ ಇಷ್ಟವಾಗುವ ತಿಂಡಿ, ಸಿಹಿ ಖಾದ್ಯಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆ, ಹಳ್ಳಿ ಹಳ್ಳಿಗಳಿಂದ ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಅಪ್ಪು ಅಭಿಮಾನಿಗಳು, ಅಪ್ಪು ಸಮಾದಿ ಬಳಿ ಆಗಮಿಸಿ ಪುಷ್ಪ ನಮನ ಸಲ್ಲಿಸಿದ್ದಾರೆ.ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಅನ್ನದಾನ ಮಾಡಲಾಗುತ್ತಿದೆ. ಇನ್ನು ರಾಜ್ಯಾದ್ಯಂತ ಇಂದು ಅನ್ನದಾನ, ರಕ್ತದಾನ ಶಿಬಿರಗಳು ನಡೆಯುತ್ತಿವೆ.
ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ ಪುನೀತ್ 29 ಅಕ್ಟೋಬರ್ 2021 ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ನಿಧನರಾದರು.ಡಾ.ರಾಜ್ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಅವರು ಕೂಡ ನೇತ್ರದಾನ ಮಾಡಿ ನಾಲ್ವರಿಗೆ ಬೆಳಕಾಗಿದ್ದಾರೆ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಟ್ಟು 31 ಅಕ್ಟೋಬರ್ ಭಾನುವಾರದಂದು ಕಂಠೀರವ ಸ್ಟುಡಿಯೋದ ಡಾ.ರಾಜ್ ಸ್ಮಾರಕದ ಆವರಣದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
