ಬೆಂಗಳೂರು: ಬೃಹತ್ ಗಾತ್ರದ ಅರಳಿ ಮರ ಉರುಳಿ ಬಿದ್ದು ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ಬಳಿ ನಡೆದಿದೆ.
ಬೆಂಗಳೂರಿನ ಆರ್.ಟಿ. ನಗರದ ಕೀರ್ತನಾ(23) ಸ್ಥಳದಲ್ಲೇ ಮೃತಪಟ್ಟ ಯುವತಿ ಎಂದು ಹೇಳಲಾಗಿದೆ. ಆಚಾರ್ಯ ಕಾಲೇಜು ಮೈದಾನದಲ್ಲಿ ನಡೆದ ಸ್ಯಾಂಡಲ್ವುಡ್ ಪ್ರೀಮಿಯರ್ ಲೀಗ್ ನೋಡಲು ಕೀರ್ತನಾ ಆಗಮಿಸಿದ್ದರು. ಸ್ನೇಹಿತೆಯ ಜೊತೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಪೊಲೀಸ್ ಠಾಣೆ ಸಮೀಪದ ಬೃಹತ್ ಗಾತ್ರದ ಅರಳಿಮರ ಉರುಳಿ ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಕೀರ್ತನಾ ಶವವನ್ನು ಸಪ್ತಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕೀರ್ತನಾ ಸ್ನೇಹಿತೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.