ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ಪಟ್ಟಣದಲ್ಲಿ ಕಾರು ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮೃತರಲ್ಲಿ ಮೂವರು ಮಹಿಳೆಯರು, 3 ಪುರುಷರು ಮತ್ತು 2 ವರ್ಷದ ಮಗು ಸೇರಿದ್ದಾರೆ. ಅವರು ನಾಸಿಕ್ನ ತಮ್ಮ ಗ್ರಾಮದಲ್ಲಿ ಹುಟ್ಟುಹಬ್ಬದ ಪಾರ್ಟಿ ಆಚರಿಸಲು ಹೋಗಿದ್ದರು.
ಬುಧವಾರ ತಡರಾತ್ರಿ ವಾಣಿ-ದಿಂಡೋರಿ ರಸ್ತೆಯ ನರ್ಸರಿ ಬಳಿ ಈ ಅಪಘಾತ ನಡೆದಿದ್ದು, ನಂತರ ಪೊಲೀಸರಿಗೆ ರಾತ್ರಿ 11.57 ಕ್ಕೆ ಮಾಹಿತಿ ಸಿಕ್ಕಿತು. ಪೊಲೀಸರು ಸ್ಥಳಕ್ಕೆ ತಲುಪಿದಾಗ, ರಸ್ತೆಯ ಪಕ್ಕದಲ್ಲಿರುವ ಸಣ್ಣ ಕಾಲುವೆಯಲ್ಲಿ ಎರಡು ವಾಹನಗಳು ಬಿದ್ದಿರುವುದನ್ನು ಅವರು ನೋಡಿದರು. ಆಲ್ಟೊ ಕಾರು ಮತ್ತು ಮೋಟಾರ್ ಸೈಕಲ್ ನಡುವೆ ಡಿಕ್ಕಿಯಾದ ಪರಿಣಾಮ ಕಾರು ರಸ್ತೆ ಬದಿಯ ಚರಂಡಿಗೆ ಉರುಳಿತು. ವಾಹನಕ್ಕೆ ದೊಡ್ಡ ಹಾನಿಯಾಗಿದೆ. ಅಪಘಾತದ ತೀವ್ರತೆಯಿಂದಾಗಿ ಕಾರಿನೊಳಗಿನ ಪ್ರಯಾಣಿಕರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಅವರ ಮೂಗು ಮತ್ತು ಬಾಯಿಯ ಮೂಲಕ ನೀರು ಪ್ರವೇಶಿಸಿದ್ದು, ನಂತರ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮೃತರನ್ನು ದೇವಿದಾಸ್ ಪಂಡಿತ್ ಗಂಗುರ್ಡೆ (28), ಮನಿಶಾ ದೇವಿದಾಸ್ ಗಂಗುರ್ಡೆ (23), ಉತ್ತಮ್ ಏಕನಾಥ್ ಜಾಧವ್ (42), ಅಲ್ಕಾ ಉತ್ತಮ್ ಜಾಧವ್ (38), ದತ್ತಾತ್ರೇ ನಾಮದೇವ್ ವಾಘಮಾರೆ (45), ಅನುಸಯಾ ದತ್ತಾತ್ರೇ ವಾಘಮಾರೆ (40), ಮತ್ತು ಭವೇಶ್ ದೇವಿದಾಸ್ (40) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ಮೋಟಾರ್ ಸೈಕಲ್ ನಲ್ಲಿದ್ದ ಗಾಯಾಳುಗಳನ್ನು ಮಂಗೇಶ್ ಯಶವಂತ ಕುರ್ಘಡೆ (25), ಅಜಯ್ ಜಗನ್ನಾಥ್ ಗೊಂಡ್ (18) ಎಂದು ಗುರುತಿಸಲಾಗಿದೆ. ಸದ್ಯ ಅವರು ನಾಸಿಕ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.