ಹಾಸನ: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ ತಿರುಪತಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದಲ್ಲಿ ಪ್ರಸಾದ ಸೇವಿಸಿ 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ.
ಮಾಲೇಕಲ್ ತಿರುಪತಿ ಜಾತ್ರೆಯ ಅಂಗವಾಗಿ ಪ್ರಸಾದ ಸಿದ್ಧಪಡಿಸಲಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ಪ್ರಸಾದ ಸೇವಿಸಿದ್ದು, 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕ ತಿರುಪತಿ ಎಂದೇ ಪ್ರಸಿದ್ಧವಾಗಿರುವ ಮಾಲೆಕಲ್ ತಿರುಪತಿಯಲ್ಲಿ ಖಾಸಗಿ ಸಂಘ ಸಂಸ್ಥೆಯೊಂದು ಪ್ರಸಾದ ಹಂಚಿಕೆ ಮಾಡಿತ್ತು. ಜುಲೈ 13 ರಂದು ರಾತ್ರಿ 7.30 ರಲ್ಲಿ ಭಕ್ತರಿಗೆ ಮೊಸರನ್ನ, ಬಿಸಿಬೇಳೆ ಬಾತ್ ಹಂಚಿಕೆ ಮಾಡಲಾಗಿತ್ತು. ಸುಮಾರು ಒಂದುವರೆ ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಗಿತ್ತು.
ಪ್ರಸಾದ ಸೇವನೆ ನಂತರ ಹೊಟ್ಟೆ ನೋವು, ವಾಂತಿಯಿಂದ ಅನೇಕರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾಗಿದ್ದ 50 ಕ್ಕೂ ಅಧಿಕ ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಸೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಅಸ್ವಸ್ಥರಾದವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ 30ಕ್ಕೂ ಅಧಿಕ ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಕೂಡಲೇ ಚಿಕಿತ್ಸೆ ಪಡೆದುಕೊಂಡಿದ್ದರಿಂದ ಭಕ್ತರು ಅಪಾಯದಿಂದ ಪಾರಾಗಿದ್ದಾರೆ. ಭಕ್ತರು ಸೇವಿಸಿದ ಪ್ರಸಾದದ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ ಗೆ ರವಾನೆ ಮಾಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.