BREAKING : ಕನ್ನಡದ ಬಗ್ಗೆ ನಟ ‘ಕಮಲ್ ಹಾಸನ್’ ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರ ಆಕ್ರೋಶ, ಬೃಹತ್ ಪ್ರತಿಭಟನೆ

ಬೆಂಗಳೂರು : ಕನ್ನಡದ ಬಗ್ಗೆ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಕಮಲ್ ಹಾಸನ್ ಫೋಸ್ಟರ್ ಗೆ ಮಸಿ ಬಳಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಸಿನಿಮಾ ರಿಲೀಸ್ ಗೆ ಕರ್ನಾಟಕದಲ್ಲಿ ಯಾವ ಕಾರಣಕ್ಕೂ ಅವಕಾಶ ನೀಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರವೇ ನಾರಾಯಣ ಗೌಡ ಕಿಡಿ

ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರು ಕನ್ನಡ ಭಾಷೆಯು ತಮಿಳಿನಿಂದ ಉಗಮವಾಯಿತು ಎಂದು ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು, ದುರುದ್ದೇಶಪೂರಿತ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಈ ಹೇಳಿಕೆ ಅವರ ಅಜ್ಞಾನವನ್ನು ಬಯಲುಗೊಳಿಸುತ್ತದೆ. ಕನ್ನಡ ಮತ್ತು ತಮಿಳು ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದರೂ, ಇವು ತಮ್ಮದೇ ಆದ ಸ್ವತಂತ್ರ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೊಂದಿವೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಕಿಡಿಕಾರಿದ್ದಾರೆ.

ಕನ್ನಡ ಭಾಷೆಗೆ ಸುಮಾರು 4600–5000 ವರ್ಷಗಳ ಇತಿಹಾಸವಿದೆ. ಭಾಷಾಶಾಸ್ತ್ರೀಯ ಅಧ್ಯಯನಗಳ ಪ್ರಕಾರ, ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ (ಪ್ರೊಟೊ-ದ್ರಾವಿಡಿಯನ್) ಸುಮಾರು 2500–3000 ಕ್ರಿ.ಪೂ. ಆಸುಪಾಸಿನಲ್ಲಿ ಕವಲೊಡೆದಿವೆ. ಅಶೋಕನ ಕಾಲದ ಪ್ರಾಕೃತ ಶಾಸನಗಳಲ್ಲಿ (ಕ್ರಿ.ಪೂ. 3ನೇ ಶತಮಾನ) ಕರ್ನಾಟಕದಲ್ಲಿ ಕಂಡುಬಂದ ಕೆಲವು ಶಾಸನಗಳು ಕನ್ನಡದ ಆದಿಪದಗಳ ಬಳಕೆಯನ್ನು ಸೂಚಿಸುತ್ತವೆ. ಕನ್ನಡದ ಲಿಖಿತ ರೂಪಕ್ಕೆ 2000 ವರ್ಷಗಳ ಇತಿಹಾಸವಿದ್ದು, ಇದಕ್ಕೂ ಮುಂಚಿನ 2000 ವರ್ಷಗಳ ಭಾಷಿಕ ಇತಿಹಾಸವನ್ನು ಒಳಗೊಂಡಂತೆ, ಕನ್ನಡ ನುಡಿಯ ಒಟ್ಟಾರೆ ಇತಿಹಾಸ 4600 ವರ್ಷಗಳಿಗೂ ಹೆಚ್ಚಿನದಾಗಿದೆ.
ತಮಿಳು ಸಾಹಿತ್ಯಕ್ಕೆ ಪ್ರಾಚೀನತೆಯಿದ್ದರೂ, ತಮಿಳು ಭಾಷೆಯು ಕನ್ನಡಕ್ಕಿಂತ ಹಳೆಯದು ಎನ್ನಲು ಯಾವುದೇ ಐತಿಹಾಸಿಕ ಅಥವಾ ಭಾಷಾಶಾಸ್ತ್ರೀಯ ಆಧಾರಗಳಿಲ್ಲ. ಇತ್ತೀಚಿನ ಭಾಷಾಶಾಸ್ತ್ರೀಯ ಸಂಶೋಧನೆಗಳು ತಮಿಳು, ಕನ್ನಡ, ತುಳು, ತೆಲುಗು ಮೊದಲಾದ ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ ಏಕಕಾಲಕ್ಕೆ ವಿಕಾಸಗೊಂಡಿವೆ ಎಂದು ಸ್ಪಷ್ಟಪಡಿಸಿವೆ. ಹಲ್ಮಿಡಿ ಶಾಸನ (ಕ್ರಿ.ಶ. 450) ಕನ್ನಡದ ಅತ್ಯಂತ ಪ್ರಾಚೀನ ಲಿಖಿತ ದಾಖಲೆಯಾಗಿದ್ದು, ಕನ್ನಡದ ಸ್ವತಂತ್ರ ಅಸ್ತಿತ್ವವನ್ನು ದೃಢಪಡಿಸುತ್ತದೆ. ಇದಕ್ಕಿಂತಲೂ ಹಳೆಯ ಬ್ರಾಹ್ಮೀ ಲಿಪಿಯ ಶಾಸನಗಳು ಕರ್ನಾಟಕದ ಬನವಾಸಿ, ಚಂದ್ರವಳ್ಳಿಯಂತಹ ಕಡೆಗಳಲ್ಲಿ ಕಂಡುಬಂದಿವೆ, ಇದು ಕನ್ನಡ ಭಾಷೆಯು ತಮಿಳಿನಿಂದ ಉಗಮವಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.

ಕನ್ನಡ ಸಾಹಿತ್ಯವು ತನ್ನದೇ ಆದ ವಿಶಿಷ್ಟ ವ್ಯಾಕರಣ, ಶಬ್ದಕೋಶ ಮತ್ತು ಶೈಲಿಯನ್ನು ಹೊಂದಿದ್ದು, ತಮಿಳಿನಿಂದ ಸಂಪೂರ್ಣ ಭಿನ್ನವಾಗಿದೆ. ಪಂಪ, ರನ್ನ, ಬಸವಣ್ಣ, ಕುವೆಂಪು ಮುಂತಾದ ಕವಿಗಳಿಂದ ಮತ್ತು ಎಂಟು ಜ್ಞಾನಪೀಠ ಪ್ರಶಸ್ತಿಗಳಿಂದ ಸಮೃದ್ಧವಾದ ಕನ್ನಡ ಸಾಹಿತ್ಯವು ತನ್ನ ಸ್ವತಂತ್ರ ಗುರುತನ್ನು ಶತಮಾನಗಳಿಂದ ಉಳಿಸಿಕೊಂಡಿದೆ.
ಕಮಲ್ ಹಾಸನ್ ಅವರ ಈ ಹೇಳಿಕೆಯು ದಕ್ಷಿಣ ಭಾರತದ ಜನತೆಯು ಹಿಂದಿ ಹೇರಿಕೆ ಮತ್ತು ಸಾಮ್ರಾಜ್ಯಶಾಹಿಯ ವಿರುದ್ಧ ನಡೆಸುತ್ತಿರುವ ಒಗ್ಗಟ್ಟಿನ ಹೋರಾಟಕ್ಕೆ ಗಂಭೀರ ಹಾನಿಯುಂಟುಮಾಡುತ್ತದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮೊದಲಾದ ದ್ರಾವಿಡ ಭಾಷೆಗಳು ಒಂದಾಗಿ ನಿಲ್ಲಬೇಕಾದ ಈ ಸಂದರ್ಭದಲ್ಲಿ, ಈ ಜವಾಬ್ದಾರಿಯಿಲ್ಲದ ಹೇಳಿಕೆಯು ಭಾಷಿಕ ಸಮುದಾಯಗಳ ನಡುವೆ ಒಡಕು ಮತ್ತು ಭಿನ್ನಾಭಿಪ್ರಾಯವನ್ನು ಉಂಟುಮಾಡುವ ಕೀಳುಮಟ್ಟದ ರಾಜಕೀಯ ತಂತ್ರವಾಗಿದೆ. ಇದು ಕೇವಲ ಕನ್ನಡಿಗರಿಗೆ ಅವಮಾನವಲ್ಲ, ದಕ್ಷಿಣ ಭಾರತದ ಎಲ್ಲ ಭಾಷೆಗಳ ಗೌರವಕ್ಕೆ ಧಕ್ಕೆ ತರುವ ಕೃತ್ಯವಾಗಿದೆ.

ಕಮಲ್ ಹಾಸನ್ ಅವರು ಒಬ್ಬ ಅತ್ಯುತ್ತಮ ಕಲಾವಿದರಾಗಿದ್ದು, ಕನ್ನಡ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. ಆದರೆ, ಇಂತಹ ಹೇಳಿಕೆಗಳಿಂದ ಕನ್ನಡಿಗರು ಮತ್ತು ತಮಿಳರ ನಡುವೆ ದ್ವೇಷವನ್ನು ಹುಟ್ಟುಹಾಕುವುದು ಸರಿಯಲ್ಲ. ಅವರು ತಕ್ಷಣವೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡು, ಕನ್ನಡಿಗರ ಭಾವನೆಗಳಿಗೆ ಗೌರವ ತೋರಬೇಕೆಂದು ಒತ್ತಾಯಿಸುತ್ತೇವೆ. ಕನ್ನಡಿಗರೆಲ್ಲರೂ ಈ ರೀತಿಯ ದುರುದ್ದೇಶಪೂರಿತ ಹೇಳಿಕೆಗಳ ವಿರುದ್ಧ ಒಗ್ಗಟ್ಟಾಗಿ ಧ್ವನಿಯೆತ್ತಬೇಕೆಂದು ಕರೆ ನೀಡುತ್ತೇನೆ ಎಂದು ಅವರು ಮನವಿ ಮಾಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read