ಬೆಂಗಳೂರು: ರಾಜ್ಯದ 32 ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಸಂಸ್ಥೆಯ ಸಹಯೋಗದಲ್ಲಿ ಸ್ಥಾಪಿಸಿರುವ ಮೆದುಳು ಆರೋಗ್ಯ ಕೇಂದ್ರಗಳ(‘ಬ್ರೈನ್ ಹೆಲ್ತ್ ಕ್ಲಿನಿಕ್’) ಸೇವೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನೂತನ ಮೆದುಳು ಆರೋಗ್ಯ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೆದುಳು ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ತಿಳಿಸಿದ್ದಾರೆ.
ರಾಜ್ಯದ 31 ಜಿಲ್ಲೆ ಮತ್ತು ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸೇರಿ 32 ಮೆದುಳು ಆರೋಗ್ಯ ಚಿಕಿತ್ಸಾಲಯ ಸ್ಥಾಪಿಸಲಾಗಿದೆ. ನರರೋಗಿಗಳಿಗೆ ಸಕಾಲಿಕ ಚಿಕಿತ್ಸೆ ಮತ್ತು ಆರೈಕೆಗಾಗಿ ನೋಡಲ್ ಕೇಂದ್ರಗಳಾಗಿ ಇವು ಕಾರ್ಯನಿರ್ವಹಿಸುತ್ತವೆ. ಪ್ರಾಥಮಿಕ ಹಂತದಲ್ಲಿ ರೋಗ ನಿರ್ಣಯ ಮೆದುಳಿನ ಆರೋಗ್ಯ ಜಾಗೃತಿ ಮೂಡಿಸಲು ನೆರವಾಗಲಿವೆ.
ಮಿದುಳಿನ ಆರೋಗ್ಯವನ್ನು ಕಾಪಾಡುವ ಮಹತ್ವವನ್ನು ಮನಗಂಡ ಕರ್ನಾಟಕ ರಾಜ್ಯಾದ್ಯಂತ ಸ್ಥಳೀಯ ಮೆದುಳಿನ ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸುವ ಮೂಲಕ ದೇಶಕ್ಕೆ ಮಾದರಿಯಾಗಿದೆ.
ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ ನ ಪ್ರಮುಖ ಅಂಶಗಳು:
ಕರ್ನಾಟಕದಾದ್ಯಂತ 31 ಜಿಲ್ಲೆಗಳು ಮತ್ತು BBMP ಆಸ್ಪತ್ರೆಗಳಲ್ಲಿ ಮೆದುಳಿನ ಆರೋಗ್ಯ ಚಿಕಿತ್ಸಾಲಯಗಳ ಸ್ಥಾಪನೆ.
ನರವೈಜ್ಞಾನಿಕ ಅಸ್ವಸ್ಥತೆಗಳ ನಿರ್ವಹಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ರಾಜ್ಯಾದ್ಯಂತ ‘ಸಾಮರ್ಥ್ಯ ವಿದ್ಧಿ’ ತರಬೇತಿ ಕಾರ್ಯಕ್ರಮ.
ನರವಿಜ್ಞಾನಿಗಳ ರಾಜ್ಯವ್ಯಾಪಿ ಜಾಲ.
ಆರಂಭಿಕ ರೋಗನಿರ್ಣಯ ಮತ್ತು ಸಮಯೋಚಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಸಂಯೋಜಕರಿಂದ ಅನುಷ್ಠಾನಗೊಳಿಸುವಿಕೆ.
ಸಾಂಕ್ರಾಮಿಕ ರೋಗಗಳು, ಮಾನಸಿಕ ಆರೋಗ್ಯ, ಮತ್ತು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಅಂತರ-ಇಲಾಖೆಯ ಸಮನ್ವಯ.
ಮೆದುಳಿನ ಆರೋಗ್ಯ ಜಾಗೃತಿ ಅಭಿಯಾನ.
ಡಿಜಿಟಲ್ ಡೇಟಾ ಮತ್ತು ಮಾಹಿತಿ ವ್ಯವಸ್ಥೆ.
ಈ ಬ್ರೈನ್ ಹೆಲ್ತ್ ಕ್ಲಿನಿಕ್‌ಗಳು ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಮೆದುಳು ಮತ್ತು ನರವೈಜ್ಞಾನಿಕ ಕಾಯಿಲೆಗಳ ಆರೋಗ್ಯ ಮತ್ತು ಚಿಕಿತ್ಸೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಹೇಳಲಾಗಿದೆ.
https://twitter.com/dineshgrao/status/1767174348815901159