ಕೃತಕ ಬುದ್ಧಿಮತ್ತೆಯ (AI) ಶಕ್ತಿ ಮತ್ತೊಮ್ಮೆ ಸದ್ದು ಮಾಡಿದೆ. ಈ ಬಾರಿ ಬೆಂಗಳೂರಿನ ಟೆಕ್ಕಿಯೊಬ್ಬರು ತಮಾಷೆಗಾಗಿ ಎಐ ಬಳಸಿ ಕಾಲ್ಪನಿಕ ಮಹಿಳೆಯ ಚಿತ್ರವನ್ನು ರಚಿಸಿ, ಅದನ್ನು ಜನಪ್ರಿಯ ಡೇಟಿಂಗ್ ಆ್ಯಪ್ ಬಂಬಲ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಅಚ್ಚರಿಯೆಂದರೆ, ಈ ನಕಲಿ ಪ್ರೊಫೈಲ್‌ಗೆ ಸಿಕ್ಕ ಪ್ರತಿಕ್ರಿಯೆ ಆ ಟೆಕ್ಕಿಯನ್ನೇ ಬೆಚ್ಚಿಬೀಳಿಸಿದೆ!
@infinoz ಎಂಬ ಎಕ್ಸ್ ಬಳಕೆದಾರರು ಈ ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. OpenAI ಯ ಹೊಸ GPT-4o ಇಮೇಜ್ ಜನರೇಟರ್ ಬಳಸಿ ಅತ್ಯಂತ ನೈಜವಾಗಿ ಕಾಣುವ ಮಹಿಳೆಯ ಚಿತ್ರಗಳನ್ನು ರಚಿಸಿದ್ದಾಗಿ ಅವರು ವಿವರಿಸಿದ್ದಾರೆ. ಈ ಚಿತ್ರಗಳು ಎಷ್ಟೊಂದು ನಂಬಲರ್ಹವಾಗಿದ್ದವೆಂದರೆ, ಅವುಗಳಲ್ಲಿ ಒಂದನ್ನು ಬಳಸಿ ಬಂಬಲ್‌ನಲ್ಲಿ ನಕಲಿ ಪ್ರೊಫೈಲ್ ರಚಿಸಲು ಅವರು ನಿರ್ಧರಿಸಿದರು. “ನನಗೆ ಬೋರ್ ಆಗಿತ್ತು ಮತ್ತು ChatGPT ಯ ಹೊಸ ಇಮೇಜ್ ಟೂಲ್‌ನೊಂದಿಗೆ ಆಟವಾಡಲು ನಿರ್ಧರಿಸಿದೆ. ಹುಡುಗಿಯ ಕೆಲವು ಅತಿ-ವಾಸ್ತವಿಕ ಚಿತ್ರಗಳನ್ನು ಮಾಡಿದೆ. ನಂತರ ಒಂದು ಕೆಟ್ಟ ಆಲೋಚನೆ ಬಂತು – ಬೆಂಗಳೂರಿನಲ್ಲಿ ಅದರೊಂದಿಗೆ ಬಂಬಲ್ ಪ್ರೊಫೈಲ್ ಅನ್ನು ಏಕೆ ರಚಿಸಬಾರದು ?” ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ನಂತರ ನಡೆದದ್ದು ನಿಜಕ್ಕೂ ಅಚ್ಚರಿ ಮೂಡಿಸುವಂತಿತ್ತು. ಕೇವಲ ಎರಡು ಗಂಟೆಗಳಲ್ಲಿ, ಆ ಎಐ-ರಚಿತ ಪ್ರೊಫೈಲ್ 2,750 ಕ್ಕೂ ಹೆಚ್ಚು ಲೈಕ್‌ಗಳನ್ನು, ಹಲವಾರು ಸೂಪರ್‌ಸ್ವೈಪ್‌ಗಳನ್ನು ಮತ್ತು ನಂಬಿದ ಬಳಕೆದಾರರಿಂದ ಅನೇಕ ಹೊಗಳಿಕೆಗಳನ್ನು ಗಳಿಸಿತು. ಹೊಸ ಅಧಿಸೂಚನೆಗಳಿಂದ ಅವರ ಫೋನ್ ಪ್ರತಿ ಸೆಕೆಂಡಿಗೆ ಕಂಪಿಸುತ್ತಿತ್ತು ಎಂದು ಅವರು ವಿವರಿಸಿದ್ದಾರೆ. ಐಸ್ ಕ್ರೀಮ್, ಕನ್ಸರ್ಟ್ ಟಿಕೆಟ್‌ಗಳ ಆಫರ್‌ಗಳು ಮತ್ತು ಪ್ರೀತಿಯ ಸಂದೇಶಗಳ ಮಹಾಪೂರವೇ ಹರಿದುಬಂದಿತು.
“ನನ್ನ ಫೋನ್ ಫಿಟ್ಸ್ ಬಂದವರಂತೆ ‘ಟನ್ ಟನ್ ಟನ್’ ಎಂದು ಪ್ರತಿ ಸೆಕೆಂಡಿಗೆ ಸೌಂಡ್ ಮಾಡುತ್ತಿತ್ತು” ಎಂದು ಅವರು ಬರೆದಿದ್ದಾರೆ.
ಸುಮಾರು 12 ಗಂಟೆಗಳ ನಂತರ ಬಂಬಲ್ ಈ ನಕಲಿ ಪ್ರೊಫೈಲ್ ಅನ್ನು ಪತ್ತೆಹಚ್ಚಿ ತೆಗೆದುಹಾಕಿತು ಎಂದು ವರದಿಯಾಗಿದೆ. ಆದರೆ ಅಷ್ಟರಲ್ಲಾಗಲೇ, ಈ ಸಾಮಾಜಿಕ ಪ್ರಯೋಗವು ಡೇಟಿಂಗ್‌ನ ವಾಸ್ತವ ಸ್ಥಿತಿ, ತಾಂತ್ರಿಕ ನೀತಿಶಾಸ್ತ್ರ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿನ ಲಿಂಗ ಅಸಮತೋಲನದ ಬಗ್ಗೆ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿತ್ತು.
ಈ ಘಟನೆಗೆ ಆನ್‌ಲೈನ್‌ನಲ್ಲಿ ತಕ್ಷಣವೇ ಪ್ರತಿಕ್ರಿಯೆಗಳು ಬಂದವು, ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ಗಂಭೀರವಾಗಿ ಚರ್ಚಿಸಿದರು. ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದು, “ಇದು ಕೇವಲ ಎಐ ಬಗ್ಗೆ ಅಲ್ಲ – ಇದು ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿನ ಬೇಡಿಕೆ ಮತ್ತು ಪೂರೈಕೆಯ ನಡುವಿನ ದೊಡ್ಡ ಅಂತರವನ್ನು ತೋರಿಸುತ್ತದೆ. ಅಲ್ಲಿ 80-20 ರ ಅನುಪಾತವಿದೆ.” ಮತ್ತೊಬ್ಬರು, “ನೆನಪಿಡಿ, ಡೇಟಿಂಗ್ ಅಪ್ಲಿಕೇಶನ್‌ಗಳು ನಿಮ್ಮನ್ನು ವ್ಯಸನಿಯಾಗಿಸಲು ವಿನ್ಯಾಸಗೊಳಿಸಲಾಗಿದೆ. ಅಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವ ಸಾಧ್ಯತೆಗಳು ನೈಜ ಜೀವನಕ್ಕಿಂತ ಬಹಳ ಕಡಿಮೆ” ಎಂದು ಅಭಿಪ್ರಾಯಪಟ್ಟಿದ್ದಾರೆ.