ಜಾರ್ಖಂಡ್‌ನ ನೋಮುಂಡಿಯಲ್ಲಿ ನಡೆದ ವಿಚಿತ್ರ ಘಟನೆಯೊಂದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಕಳ್ಳತನದ ಉದ್ದೇಶದಿಂದ ದೇವಸ್ಥಾನಕ್ಕೆ ನುಗ್ಗಿದ ಯುವಕನೊಬ್ಬ, ಅತಿಯಾದ ಅಮಲಿನಿಂದಾಗಿ ಕಳ್ಳತನದ ಮಧ್ಯೆಯೇ ನಿದ್ದೆಗೆ ಜಾರಿದ್ದಾನೆ.
ವೀರ ನಾಯಕ್ ಎಂದು ಗುರುತಿಸಲಾದ ಈ ವ್ಯಕ್ತಿ, ದೇವಸ್ಥಾನದೊಳಗೆ ಮಲಗಿರುವುದನ್ನು ಮಂಗಳವಾರ ಬೆಳಿಗ್ಗೆ ಸ್ಥಳೀಯರು ಮತ್ತು ಅರ್ಚಕರು ಪತ್ತೆ ಮಾಡಿದ್ದಾರೆ. ಕದ್ದ ವಸ್ತುಗಳೊಂದಿಗೆ ಆತ ದೇವಸ್ಥಾನದೊಳಗೆ ಮಲಗಿದ್ದ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ಸ್ನೇಹಿತರೊಂದಿಗೆ ಹೆಚ್ಚಿನ ಪ್ರಮಾಣದ ಮದ್ಯ ಸೇವಿಸಿರುವುದಾಗಿ ನಾಯಕ್ ಒಪ್ಪಿಕೊಂಡಿದ್ದಾನೆ. ಅಮಲಿನಲ್ಲಿದ್ದಾಗ, ಆತ ಕಾಳಿ ದೇವಸ್ಥಾನದ ಗೋಡೆಯನ್ನು ಹಾರಿ, ಮುಖ್ಯ ದ್ವಾರದ ಬೀಗ ಮುರಿದು ಒಳನುಗ್ಗಿದ್ದಾನೆ. ದೇವಸ್ಥಾನದೊಳಗಿದ್ದ ಅಲಂಕಾರಿಕ ವಸ್ತುಗಳು, ಗಂಟೆ, ಪೂಜಾ ತಟ್ಟೆ ಮತ್ತು ಆಭರಣಗಳು ಸೇರಿದಂತೆ ಎಲ್ಲವನ್ನೂ ಕದ್ದಿದ್ದಾನೆ.
ಕದ್ದ ವಸ್ತುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಪರಾರಿಯಾಗಲು ಸಿದ್ಧವಾಗಿದ್ದ ನಾಯಕ್‌ಗೆ, ಅಮಲು ಹೆಚ್ಚಾಗಿ ನಿದ್ದೆ ಬಂದಿದೆ. ದೇವಸ್ಥಾನದ ಒಳಗೇ ಮಲಗಿದ ಆತ, ಅರೆನಿದ್ದೆಗೆ ಜಾರಿದ್ದಾನೆ. ಮಂಗಳವಾರ ಬೆಳಿಗ್ಗೆ ದೇವಸ್ಥಾನದೊಳಗೆ ವ್ಯಕ್ತಿಯೊಬ್ಬ ಮಲಗಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಬಂದು, ಆತನ ಚೀಲವನ್ನು ಪರಿಶೀಲಿಸಿದಾಗ ಕದ್ದ ವಸ್ತುಗಳು ಪತ್ತೆಯಾಗಿವೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ನಾಯಕನನ್ನು ಬಂಧಿಸಿದ್ದಾರೆ.
ದೇವಸ್ಥಾನದ ಗರ್ಭಗುಡಿಯಿಂದ ಚಿನ್ನಾಭರಣಗಳು ಮತ್ತು ದೇವಿಯ ಕಿರೀಟ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ನಾಯಕ್ ಕದ್ದಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ, ಕಳ್ಳತನಕ್ಕೆ ಯತ್ನಿಸಿರುವುದಾಗಿ ಒಪ್ಪಿಕೊಂಡ ನಾಯಕ್, ತಾನು ಯಾವಾಗ ನಿದ್ದೆಗೆ ಜಾರಿದೆ ಎಂದು ಗೊತ್ತಿಲ್ಲ ಎಂದು ಹೇಳಿದ್ದಾನೆ.
#झारखंड में पश्चिम सिंहभूम में काली मंदिर में चोरी के बाद वहीं पर सो गया चोर, सुबह उठा तो चोर को खुद के सामने नजर आई पुलिस
— DINESH SHARMA (@medineshsharma) July 16, 2025
स्थानीय लोगों ने कहा- ये माता काली की है लीला
पुजारी की सूचना पर घटनास्थल पर पहुंची पुलिस ने चोर को किया गिरफ्तार #JharkhandNews pic.twitter.com/UHAH60lbTc